
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಇದೀಗ ಸರ್ಕಾರ ರಚನೆಯ ಕಸರತ್ತು ಆರಂಭಿಸಿದ್ದು, ಕಾಂಗ್ರೆಸ್ ಮತ್ತು ಪಿಎಂಕೆಯಂತಹ ಪ್ರಮುಖ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿವೆ.
ಚುನಾವಣೆಯಲ್ಲಿ ಒಟ್ಟು 108 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯ್ ಅಬ್ಬರಿಸಿದ್ದರೂ, ಸ್ಪಷ್ಟ ಬಹುಮತಕ್ಕೆ ಇನ್ನೂ 10 ಶಾಸಕರ ಬೆಂಬಲದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಅವರು ಇಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. ಮಂಗಳವಾರವೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಮೈತ್ರಿ ಮಾಡಿಕೊಳ್ಳುವ ಬದಲಾಗಿ ಈ ಪಕ್ಷಗಳಿಗೆ ಸಂಪುಟದಲ್ಲಿ ತಲಾ ಎರಡು ಸಚಿವ ಸ್ಥಾನಗಳನ್ನು ನೀಡುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಇನ್ನುಳಿದಂತೆ ಎರಡು ಸ್ಥಾನ ಗೆದ್ದಿರುವ ಎಡಪಕ್ಷಗಳು ಮತ್ತು ಇತರ ಪ್ರಾದೇಶಿಕ ಪಕ್ಷಗಳಾದ ವಿಸಿಕೆ ಹಾಗೂ ಡಿಎಂಡಿಕೆ ತಮ್ಮ ನಿಲುವನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ.
ಮಂಗಳವಾರ ವಿಜಯ್ ಅವರು ತಮ್ಮ ಪಕ್ಷದ ನೂತನ ಶಾಸಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದು, ಮೈತ್ರಿ ಮತ್ತು ಮುಂದಿನ ರಾಜಕೀಯ ನಡೆಗಳ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.



