*Breaking News…* *ಶಿವಾನಂದ ನೀಲಣ್ಣವರ್ ಆರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾನೂನು ಬಾಹಿರವಾಗಿ ಸಾರ್ವಜನಿಕರ ಹಣ ಸಂಗ್ರಹಿಸಿರುವ ಆರೋಪ ಹೊತ್ತಿರುವ ಬೆಳಗಾವಿ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಲಾಗಿದೆ.
ಶಿವಾನಂದ ಅವರ ಮನೆ, ಕಚೇರಿ ಹಾಗೂ ವಿವಿಧ ಸ್ಥಳಗಳ ಮೇಲೆ ಗುರುವಾರ ದಾಳಿ ಆರಂಭಿಸಲಾಗಿತ್ತು. ಶುಕ್ರವಾರ ಕೂಡ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಯಿತು. ಮಧ್ಯಾಹ್ನ ಶಿವಾನಂದ ಅವರನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿ, ರಾತ್ರಿ ಪ್ರಕರಣ ದಾಖಲಿಸಿ, ಬಳಿಕ ಶಿವಬಸವ ನಗರದ ಮನೆಯಿಂದ ಅವರನ್ನು ವಶಕ್ಕೆ ಪಡೆಯಲಾಯಿತು.
ಬಳಿಕ ಮಾಳ ಮಾರುತಿ ಪೊಲೀಸ್ ಠಾಣೆಗೆ ಶಿವಾನಂದ ನೀಲಣ್ಣವರ್ ಶಿಫ್ಟ್ ಮಾಡಲಾಯಿತು. ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರ ನೇತೃತ್ವದಲ್ಲಿ ಶಿವಾನಂದ ನೀಲಣ್ಣವರ್ ತೀವ್ರ ವಿಚಾರಣೆ ನಡೆಯುತ್ತಿದೆ.
‘ಅಕ್ಯೂಮೆನ್’ ಆ್ಯಪ್ ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳಲು ಆರಂಭಿಸಿದ್ದರು. ಈ ಆ್ಯಪ್ ಮೂಲಕ ಸಾವಿರಾರು ಕೋಟಿ ಹೂಡಿಕೆಯಾಗಿದೆ ಎಂಬ ಮಾಹಿತಿ ಕೂಡ ಮೂಲಗಳಿಂದ ಸಿಕ್ಕಿದೆ.
ಅವರು ಸಂಗ್ರಹಿಸಿರುವ ಹಣದ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬೀಳದಿದ್ದರೂ ಸಾವಿರಾರು ಕೋಟಿ ರೂ. ಇರಬಹುದೆನ್ನುವ ವದಂತಿ ಹರಡಿದೆ. 30 ಸಾವಿರಕ್ಕೂ ಹೆಚ್ಚು ಜನರು ಹಣ ಇರಿಸಿದ್ದಾಗಿ ಹೇಳಲಾಗುತ್ತಿದೆ.
ಪ್ರಕರಣ ಬೆಳಗಾವಿಯಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದು, ಇಷ್ಟು ದೊಡ್ಡ ವ್ಯವಹಾರ ಇಷ್ಟು ದಿನ ಹೇಗೆ ನಡೆಯುತ್ತಿದೆ ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.




