
ಪ್ರಗತಿವಾಹಿನಿ ಸುದ್ದಿ: ಎರಡು ಆನೆಗಳ ನಡುವೆ ನಡೆದ ದಿಢೀರ್ ಕಾಳಗಕ್ಕೆ ಸಿಲುಕಿ ತಮಿಳುನಾಡಿನ ಚೆನ್ನೈ ಮೂಲದ ಜಿನ್ನು (33) ಎಂಬ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರಕ್ಕೆ ಮಹಿಳೆ ಬಂದಿದ್ದಳು, ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಶಿಬಿರದಲ್ಲಿ ಎಂದಿನಂತೆ ಆನೆಗಳಿಗೆ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ಮಾವುತರು ‘ಮಾರ್ತಾಂಡ’ ಮತ್ತು ‘ಕಂಜನ್ ಎಂಬ ಎರಡು ಸಾಕಾನೆಗಳನ್ನು ನೀರಿಗೆ ಕರೆತಂದಿದ್ದರು.
ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ನೀರಿಗೆ ಇಳಿಸುವ ಧಾವಂತದಲ್ಲಿ, ಆನೆ ಸ್ವಲ್ಪ ವೇಗವಾಗಿ ಪಕ್ಕದಲ್ಲೇ ಇದ್ದ ಕಂಜನ್ ಆನೆಗೆ ತಾಗಿದೆ. ಮಾರ್ತಾಂಡ ಆನೆ ತನ್ನ ಮೈಗೆ ತಾಗುತ್ತಿದ್ದಂತೆ ಕೆರಳಿದ ಕಂಜನ್ ಆನೆ ತೀವ್ರ ಆಕ್ರೋಶಗೊಂಡು ಎದುರಾಳಿ ಆನೆಯ ಮೇಲೆ ಮುಗಿಬಿದ್ದಿದೆ.
ನದಿಯ ದಡದಲ್ಲೇ ಎರಡು ದೈತ್ಯ ಆನೆಗಳು ಪರಸ್ಪರ ಕಾದಾಡಲು ಆರಂಭಿಸುತ್ತಿದ್ದಂತೆ ಅಲ್ಲಿದ್ದ ಪ್ರವಾಸಿಗರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಗದ್ದಲದ ನಡುವೆ ಸಿಲುಕಿದ ಪ್ರವಾಸಿ ಮಹಿಳೆ ಜಿನ್ನು ಅವರಿಗೆ ಆನೆಗಳು ಬಲವಾಗಿ ಡಿಕ್ಕಿ ಹೊಡೆದಿದ್ದು, ಕಾಲಡಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾವುತರಾದ ಗೌಸ್ ಮತ್ತು ವಿಜಯ್ ಅವರು ಆನೆಗಳನ್ನು ನಿಯಂತ್ರಿಸಲು ತಕ್ಷಣವೇ ಶ್ರಮಿಸಿದರೂ ಅಷ್ಟರಲ್ಲಾಗಲೇ ಅನಾಹುತ ಸಂಭವಿಸಿತ್ತು.
ದುರ್ಘಟನೆಯಿಂದಾಗಿ ಸ್ಥಳದಲ್ಲಿ ನೆರೆದಿದ್ದ ಪ್ರವಾಸಿಗರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹವನ್ನು ಕೂಡಲೇ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ನಿತ್ಯವೂ ಸಾವಿರಾರು ಜನ ಭೇಟಿ ನೀಡುವ ದುಬಾರೆ ಶಿಬಿರದಲ್ಲಿ ಆನೆಗಳನ್ನು ಹತ್ತಿರದಿಂದ ನೋಡುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಇದೆಯೇ ಎಂಬ ಆತಂಕ ಈಗ ಮೂಡಿದೆ.
ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಸುರಕ್ಷತಾ ಅಂತರ ಕಾಯ್ದುಕೊಳ್ಳದಿರುವುದೇ ಈ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.


