ಪ್ರಗತಿವಾಹಿನಿ ಸುದ್ದಿ, ಹೈದರಬಾದ್: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಂಧ್ರ ವಿಧಾನಪರಿಷತ್ ರದ್ದುಗೊಳಿಸುವ ಮಹತ್ವದ ನಿರ್ಣಯಕ್ಕೆ ಅನುಮೋದನೆ ಸಿಕ್ಕಿದೆ.
ಈ ಕುರಿತು ಮಾಹಿತಿ ನೀಡಿರುವ ವೈಎಸ್‍ಆರ್ ಶಾಸಕ ಗೋವಿಂದ ಅಮರನಾಥ್ ಸಿಎಂ ಜಗನ್‍ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ವಿಧಾನಪರಿಷತ್ ರದ್ದುಗೊಳಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಎರಡು ದಿನಗಳ ಕಾಲ ನಡೆದ ಚರ್ಚೆಯ ಮೇಲೆ ಗುರುವಾರ ಆಂಧ್ರದ ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ವೇಳೆ ಸಿಎಂ ಜಗನ್ ಅವರು ಸ್ಪೀಕರ್ ಬಳಿ ವಿಧಾನ ಪರಿಷತ್ತನ್ನು ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಚರ್ಚಿಸಲು ಸೋಮವಾರ ಅವಕಾಶ ಕೇಳಿದ್ದರು. ಇದೀಗ ವಿಧಾನ ಪರಿಷತ್ತನ್ನು ತೆಗೆದುಹಾಕಲು ಸಂಪುಟ ಅನುಮೋದನೆ ನೀಡಿದೆ.
ಇನ್ನು ವಿಧಾನಪರಿಷತ್ ರದ್ದುಪಡಿಸುವ ಕುರಿತು ಆಂಧ್ರಪ್ರದೇಶ ವಿಧಾನಸಭೆ ಮೂರನೇ ಎರಡರಷ್ಟು ಬಹುಮತದೊಂದಿಗೆ ಮಸೂದೆ ಅಂಗೀಕರಿಸಬೇಕಾಗುತ್ತದೆ ಮತ್ತು ಅದನ್ನು ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಈಗ ಸಂಪುಟದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ವಿಧಾನಸಭೆಯಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.
1985ರ ಮೇ 31ರಂದು ತೆಲುಗು ದೇಶಂ ಸಂಸ್ಥಾಪಕ ಎನ್.ಟಿ.ರಾಮರಾವ್ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ವಿಧಾನ ಪರಿಷತ್ ನ್ನು ರದ್ದುಗೊಳಿಸಿದ್ದರು. ಈ ಸದನದಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದ್ದರು. 22 ವರ್ಷಗಳ ಬಳಿಕ ಅಂದರೆ 2017ರಲ್ಲಿ ರಾಜಶೇಖರ ರೆಡ್ಡಿಯವರು ವಿಧಾನಪರಿಷತ್ ನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದರು. ಇದೀಗ ಅವರ ಪುತ್ರ ಸಿಎಂ ಜಗನ್ ಮೋಹನ್ ರೆಡ್ದಿ ಮತ್ತೆ ವಿಧಾನಪರಿಷತ್ ರದ್ದುಗೊಳಿಸಲು ಮುಂದಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ