
ಪ್ರಗತಿವಾಹಿನಿ ಸುದ್ದಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರೆದಿರುವ ನಡುವೆಯೇ ಅಮೆರಿಕಾ ಹಾರ್ಮುಜ್ ಜಲಸಂಧಿ ಭಾರತೀಯ ಹಡಗನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ 3 ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ.
ಒಮಾನ್ ಕೊಲ್ಲಿಯಲ್ಲಿ ಪಲಾವ್ ಧ್ವಜದ ‘ಎಂ/ಟಿ ಸೆಟ್ಟೆಬೆಲ್ಲೊ’ (MT Settebello) ವಾಣಿಜ್ಯ ತೈಲ ಹಡಗಿನ ಮೇಲೆ ನಡೆದ ದಾಳಿಯ ಬಿಕ್ಕಟ್ಟಿನ ನಡುವೆಯೂ, ಅದರಲ್ಲಿದ್ದ ಬಹುತೇಕ 21 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಹಡಗಿನಲ್ಲಿದ್ದ ಒಟ್ಟು 24 ಭಾರತೀಯ ಸಿಬ್ಬಂದಿಗಳ ಪೈಕಿ 21 ಭಾರತೀಯರನ್ನು ಅತ್ಯಂತ ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತರಲಾಗಿದೆ.ಆದಾಗ್ಯೂ, ಈ ದಾಳಿಯಲ್ಲಿ ನಾಪತ್ತೆಯಾಗಿದ್ದ ಉಳಿದ ಮೂವರು ಭಾರತೀಯ ನಾವಿಕರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೊವಾಲ್ ಅವರು ಖಚಿತಪಡಿಸಿದ್ದಾರೆ. ಮೃತ ನಾವಿಕರ ಕುಟುಂಬಗಳಿಗೆ ಸರ್ಕಾರವು ಎಲ್ಲಾ ರೀತಿಯ ಬೆಂಬಲವನ್ನು ಘೋಷಿಸಿದೆ.
ತನ್ನ ನಾಗರಿಕರ ಮೇಲಿನ ದಾಳಿಯನ್ನು ಭಾರತ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಮೆರಿಕದ ವಿರುದ್ಧ ತಕ್ಷಣವೇ ಕಠಿಣ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಾಗರಾಜ್ ನಾಯ್ಡು ಅವರು ಭಾರತದಲ್ಲಿನ ಅಮೆರಿಕದ ಪ್ರಭಾರ ರಾಯಭಾರಿ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ತಕ್ಷಣವೇ ಸಮನ್ಸ್ ಜಾರಿಗೊಳಿಸಿ ಕಚೇರಿಗೆ ಕರೆಸಿದ್ದಾರೆ.
ಇರಾನ್ ವಿರುದ್ಧದ ಕಡಲ ದಿಗ್ಬಂಧನದ ಭಾಗವಾಗಿ ಜೂನ್ 9ರಂದು ರಾತ್ರಿ 11.14ಕ್ಕೆ ಈ ಕಾರ್ಯಾಚರಣೆ ನಡೆಸಿದ್ದಾಗಿ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಅಧಿಕೃತವಾಗಿ ದೃಢಪಡಿಸಿದೆ. ಅಮೆರಿಕದ ಮಿಲಿಟರಿ ಹೇಳಿಕೆಯ ಪ್ರಕಾರ, ಈ ಟ್ಯಾಂಕರ್ ಇರಾನ್‌ನಿಂದ ತೈಲವನ್ನು ಸಾಗಿಸುತ್ತಿತ್ತು. ಅಮೆರಿಕದ ಪಡೆಗಳು ನೀಡಿದ ಸುರಕ್ಷತಾ ಸೂಚನೆಗಳನ್ನು ಮತ್ತು ನಿಲ್ಲುವ ಆದೇಶಗಳನ್ನು ಹಡಗಿನ ಸಿಬ್ಬಂದಿ ಪದೇ ಪದೇ ಪಾಲಿಸಲು ವಿಫಲವಾದ ಕಾರಣ, ಅಮೆರಿಕದ ಯುದ್ಧ ವಿಮಾನವು ಹಡಗನ್ನು ನಿಷ್ಕ್ರಿಯಗೊಳಿಸಲು ದಾಳಿ ನಡೆಸಿದ್ದಾಗಿ ತಿಳಿಸಿದೆ.




