Belagavi NewsBelgaum NewsKannada NewsKarnataka News

*ಮೇಯರ್, ಉಪ ಮೇಯರ್ ಪಾಲಿಕೆಯಲ್ಲಿ ರಾಜ್ಯದ ಪರ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ: ಚಂದರಗಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರರ ಮತ್ತು ಉಪ ಮಹಾಪೌರರ ಹುದ್ದೆಗಳನ್ನು ಅಲಂಕರಿಸಿದವರು ಒಬ್ಬರು ನೇಕಾರರು, ಮತ್ತೊಬ್ಬರು ಲಿಂಗಾಯತ ಸಮಾಜದವರು. ಇವೆರಡೂ ಸಮಾಜಗಳು ಬೆಳಗಾವಿಯ ಗಡಿ ಹೋರಾಟದ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಲೇ ಬಂದಿವೆ. ಈಗ ಈ ಸಮಾಜಕ್ಕೆ ಸೇರಿದ ಇಬ್ಬರೂ ಸೇರಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು ಇಂದಿಲ್ಲಿ ಹೇಳಿದ್ದಾರೆ.

ರವಿವಾರ ಉಪನಗರವಾದ ವಡಗಾವಿಯಲ್ಲಿ ಗಡಿನಾಡು ಕನ್ನಡಿಗರ ಸೇನೆಯ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಳೆದ ಐದು ದಶಕಗಳಲ್ಲಿ ನಡೆದ ಕನ್ನಡ ಚಳವಳಿಗಳಲ್ಲಿ ಭಾಗವಹಿಸಿದವರಲ್ಲಿ ಈ ಭಾಗದ ಕನ್ನಡ ಅಭಿಮಾನಿಗಳೇ ಅಧಿಕ ಸಂಖ್ಯೆಯಲ್ಲಿರುತ್ತಿದ್ದರು.1988 ರಲ್ಲಿ ಬೆಂಗಳೂರಿಗೆ ಹೋಗಿದ್ದ 1200 ಜನರ ರೈಲು ಜಾಥಾದಲ್ಲಿ ಪ್ರತಿಶತ 90 ರಷ್ಟು ಜನರು ಈ ಭಾಗದವರೇ ಆಗಿದ್ದರು ಎಂದು ಸ್ಮರಿಸಿಕೊಂಡರು.

Home add -Advt

ಬೆಳಗಾವಿಯ ಸಮಾನ ಮನಸ್ಕ 22 ಕನ್ನಡ ಸಂಘಟನೆಗಳು ಕಳೆದ ಮಾರ್ಚ 26 ರಿಂದ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಗೆ ಆಗ್ರಹಿಸಿ ಹೋರಾಟ ನಡೆಸಿವೆ. ಅಂಗೀಕಾರವಾಗುವವರೆಗೆ ಹೋರಾಟ ನಡೆದೇ ನಡೆಯುತ್ತದೆ. ಅಪ್ಪಟ ಕನ್ನಡಿಗರಾದ ಮಹಾಪೌರರು ಮತ್ತು ಉಪ ಮಹಾಪೌರರು ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕು. ಈ ಪ್ರದೇಶದ ಜನರಿಗೆ ಕನ್ನಡಾಭಿಮಾನ ರಕ್ತಗತವಾಗಿ ಬಂದಿದೆ. ಇಲ್ಲಿಯ ಜನರಿಗೆ ಕನ್ನಡಾಭಿಮಾನವನ್ನು ಹೇಳಿಕೊಡುವ ದುಸ್ಸಾಹಸಕ್ಕೆ ತಾವು ಕೈ ಹಾಕುವುದಿಲ್ಲ ಎಂದು ಅಶೋಕ ಚಂದರಗಿ ಹೇಳಿದರು. 

ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು ಮಾತನಾಡಿ, ದೀರ್ಘ ಕಾಲದ ನಂತರ ಈ ಭಾಗದಲ್ಲಿ ಕನ್ನಡ ಸಂಘಟನೆಯೊಂದರ ಘಟಕ ಸ್ಥಾಪನೆ ಆಗುತ್ತಿರುವುದು ಸಂತಸದ ಸಂಗತಿಯಾಗಿದೆ. ನೇಕಾರಿಕೆ ಉದ್ಯೋಗದಲ್ಲಿಯ ಸಂಕಷ್ಟದಿಂದಾಗಿ ಹೋರಾಟದ ತೀವ್ರತೆ ಕೊಂಚ ಕಡಿಮೆಯಾಗಿದೆ. ಆದರೆ ಕನ್ನಡ ಅಭಿಮಾನಕ್ಕೆ ಕೊರತೆಯಾಗಿಲ್ಲ ಎಂದರು.

ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಅವರು ಮಾತನಾಡಿ, ತಮ್ಮ ಸಂಘಟನೆಯ ಘಟಕಗಳನ್ನು ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ಗ್ರಾಮೀಣ ವಿಧಾನಸಭೆ ಮತಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು.

ಸೇನೆಯ ರಾಜ್ಯ ಉಪಾಧ್ಯಕ್ಷೆ ವಂದನಾ ಹೊರಕೇರಿ, ಆನಂದ ಬಿಲಾವರ, ಸಂತೋಷ ಮಾಸೇನಟ್ಟಿ, ಮಂಜುನಾಥ ಪಾಸ್ತಿ, ರಂಜನ್ ಹಳಬರ,ರಾಹುಲ್ ಭೋಸ್ಲೆ, ಸಿದ್ದರಾಯ ಮಾಸೇನಟ್ಟಿ, ಸಾಗರ್ ಕೋಲ್ಕರ್ ಮುಂತಾದ ಸೇನೆಯ ಪದಾಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಎಸ್.ಎಸ್. ಮೂಕನವರ ಅವರು ಆರಂಭದಲ್ಲಿ ಸ್ವಾಗತಿಸಿ ಕೊನೆಗೆ ಆಭಾರ ಮನ್ನಿಸಿದರು.

Related Articles

Back to top button