CrimeKarnataka NewsLatest

*ಕಾಲ್ ಸ್ವೀಕರಿಸದಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ ಕತ್ತು ಹಿಸುಕಿ ಕೊಲೆ; ಬಿಸಿ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನ, ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ತಾನು ಮಾಡಿದ ಫೋನ್ ಕರೆಗಳನ್ನು ಪತ್ನಿ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಆಕೆಯೊಂದಿಗೆ ಜಗಳವಾಡಿದ ಪತಿ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ಮೃತದೇಹದ ಮೇಲೆ ಬಿಸಿ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳೇಕಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಗಂಜಾ ಮದೇಷಿಯಾ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪತ್ನಿ ತನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಮಕ್ಕಳು ಶಾಲೆಗೆ ತೆರಳಿದ ಬಳಿಕ ಜಗಳ

ಘಟನೆ ನಡೆದ ದಿನ ಬೆಳಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕವೂ ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ರಂಜಿತ್ ಕುಮಾರ್ ಪತ್ನಿಯ ಮೇಲೆ ಹಲ್ಲೆ ನಡೆಸಿ, ವೇಲ್ ಹಾಗೂ ಸೀರೆಯನ್ನು ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಮೃತಪಟ್ಟ ಬಳಿಕ ಪ್ರಕರಣವನ್ನು ಆಕಸ್ಮಿಕ ಸಾವು ಎಂಬಂತೆ ಬಿಂಬಿಸಲು ಹಾಗೂ ಮೃತದೇಹದ ಗುರುತು ಬದಲಾಗುವಂತೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಉದ್ದೇಶದಿಂದ ಮೃತದೇಹದ ಮೇಲೆ ಬಿಸಿ ಎಣ್ಣೆ ಸುರಿದು ಚರ್ಮ ಸುಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಮಾಲೀಕರ ಮಾಹಿತಿ

ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಮೈಕೋ ಲೇಔಟ್ ಪೊಲೀಸರು ತನಿಖೆ ಆರಂಭಿಸಿ, ರಂಜಿತ್ ಕುಮಾರ್ ಗುಪ್ತಾನನ್ನು ವಿಚಾರಣೆಗೊಳಪಡಿಸಿದಾಗ ಘಟನೆಗೆ ಸಂಬಂಧಿಸಿದ ಮಾಹಿತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತ್ ಕುಮಾರ್ ಗುಪ್ತಾನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಾಯಿಯನ್ನು ಕಳೆದುಕೊಂಡು, ತಂದೆಯೂ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ದಂಪತಿಯ ಮಕ್ಕಳು ಇದೀಗ ಆಘಾತ ಹಾಗೂ ಅಸಹಾಯಕ ಪರಿಸ್ಥಿತಿಗೆ ಸಿಲುಕಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button