Kannada NewsKarnataka NewsLatest

*ಫ್ಲೈಓವರ್‌ನಿಂದ ಪಲ್ಟಿ ಹೊಡೆದು ಕೆಳಗೆ ಬಿದ್ದ ಕಾರು: ಮಹಿಳೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಫ್ಲೈಓವರ್‌ನಿಂದ ಪಲ್ಟಿ ಹೊಡೆದು ಕೆಳಗೆ ಬಿದ್ದ ಘಟನೆ ನಡೆದಿದ್ದು, ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

ಮಂಡ್ಯದ ಬಳಿಯ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಈ ದುರಂತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಉಮ್ಮಡಹಳ್ಳಿ ಗೇಟ್ ಸಮೀಪ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಕ್ಸ್‌ಪ್ರೆಸ್‌ವೇ ಫ್ಲೈ ಓವರ್‌ನಿಂದ ಹಾರಿದ ಕಾರು ಅಂಡರ್ ಪಾಸ್‌ಗೆ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.

ಅಂಜನಾ (32) ಮೃತ ಮಹಿಳೆ. ಅಂಜನಾ ಬೆಂಗಳೂರು, ಮೈಸೂರಿನಲ್ಲಿ ಸ್ವಂತ ಸಾಫ್ಟ್‌ವೇರ್‌ ಕಂಪನಿ ಹೊಂದಿದ್ದ ಹರೀಶ್ ಎಂಬುವವರ ಪತ್ನಿ. ಅಂಜನಾ ಪತಿ ಹರೀಶ್‌ ಜೊತೆಗೆ ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅಂಜನಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಅಂಡರ್‌ಪಾಸ್‌ಗೆ ಬಿದ್ದಿದೆ. ಕಾರು ಅಂಡರ್‌ಪಾಸ್‌ಗೆ ಬೀಳುವಾಗ ಕಾರಿನ ಕಿಟಕಿ ಓಪನ್‌ ಆಗಿದೆ, ಇದರಿಂದ ಅಂಜನಾ ಕೆಳಗೆ ಬಿದ್ದು, ತಲೆ ರಸ್ತೆಗೆ ಬಡಿದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅಂಜನಾರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ಪತಿ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button