

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎಸ್.ಎ ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ ಜಯಮ್ಮ ಅವರು ವಿಧಿವಶರಾಗಿದ್ದಾರೆ.
ಅವರಿಗೆ 70ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಇಂದು ಬೆಳಗ್ಗೆ ಎಂಬೆಸ್ಸಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಯಿ ಅಗಲಿಕೆಯಿಂದ ನೊಂದಿರುವ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರುಳಿ, ತಾಯಿ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಜಯಮ್ಮ ಅವರು ಪಾರ್ವತಮ್ಮ ರಾಜ್‌ಕುಮಾರ್ ಅವರ ಸ್ವಂತ ಸಹೋದರ ಎಸ್.ಎ ಚಿನ್ನೇಗೌಡ ಅವರ ಪತ್ನಿ ಜಯಮ್ಮ. ನಿರ್ಮಾಪಕಿಯೂ ಆಗಿದ್ದ ಜಯಮ್ಮ ಅವರು ಪತಿ ಎಸ್.ಎ ಚಿನ್ನೇಗೌಡ ಅವರೊಂದಿಗೆ ಸೇರಿ 2006 ರಲ್ಲಿ ಮಗ ವಿಜಯ್ ರಾಘವೇಂದ್ರ ನಟನೆಯ ‘ಸೇವಂತಿ ಸೇವಂತಿ’ ಚಿತ್ರವನ್ನ ನಿರ್ಮಿಸಿದ್ದರು. ಎಸ್ ನಾರಾಯಣ್ ನಿರ್ದೇಶನದ, ನಾಯಕಿಯಾಗಿ ರಮ್ಯಾ ಅಭಿನಯಿಸಿದ್ದ ‘ಸೇವಂತಿ ಸೇವಂತಿ’ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು.
2008ರಲ್ಲಿ ವಿಜಯ್ ರಾಘವೇಂದ್ರ ಅಭಿನಯದ ಫಣಿ ರಾಮಚಂದ್ರ ನಿರ್ದೇಶನದ ‘ಗಣೇಶ ಮತ್ತೆ ಬಂದ’ ಚಿತ್ರವನ್ನ ಜಯಮ್ಮ ಚಿನ್ನೇಗೌಡ ನಿರ್ಮಿಸಿದ್ದರು.




