*ಬೆಳಗಾವಿಯ ಶಾಲೆಯೊಂದರ ಕೋಠಡಿಯಲ್ಲಿ 6 ಅಡಿ ಉದ್ದದ ಬೃಹತ್ ಹಾವು ಪ್ರತ್ಯಕ್ಷ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಲೆಯ ಕೊಠಡಿಯಲ್ಲಿ ಸುಮಾರು 6 ಅಡಿ ಉದ್ದದ ಬೃಹತ್ ಹಾವೊಂದು ದಿಢೀರನೆ ಪ್ರತ್ಯಕ್ಷವಾಗಿ, ಕೆಲಕಾಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.
ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲಾ ಕೊಠಡಿಯೊಳಗೆ ಹಾವು ಇರುವುದನ್ನು ಗಮನಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಕ್ಷಣವೇ ಎಚ್ಚೆತ್ತುಕೊಂಡು ಸುರಕ್ಷಿತವಾಗಿ ದೂರ ಸರಿದಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ತಡಮಾಡದೆ ಸ್ಥಳೀಯ ಉರಗ ರಕ್ಷಕರಾದ ರಮೇಶ್ ಮಾಳಿ ಅವರಿಗೆ ತಕ್ಷಣ ಮಾಹಿತಿ ಮುಟ್ಟಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ರಮೇಶ್ ಮಾಳಿ ಅವರು, ಸುರಕ್ಷಿತವಾಗಿ ಹಾವು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು ಹಿಡಿದ ನಂತರವಷ್ಟೇ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
6 ಅಡಿ ಉದ್ದದ ಬೃಹತ್ ಹಾವನ್ನು ರಮೇಶ್ ಮಾಳಿ ಅವರು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಹತ್ತಿರದ ನದಿಯ ಜಲಮೂಲ ಹಾಗೂ ಪ್ರಕೃತಿಯ ಮಡಿಲಿಗೆ ಮುಕ್ತವಾಗಿ ಬಿಟ್ಟಿದ್ದಾರೆ.




