
ಪ್ರಗತಿವಾಹಿನಿ ಸುದ್ದಿ: ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ ಮಂಜುನಾಥ್ಗೆ ಆಪ್ತರಾಗಿರುವ ಅಧಿಕಾರಿಗಳಿಗೂ ಇಡಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಚಿಕ್ಕೋಡಿ ಅಬಕಾರಿ ಡಿವೈಎಸ್ಪಿ ಮತ್ತು ತುಮಕೂರು ಅಬಕಾರಿ ಎಸ್ಪಿ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಆರಂಭಿಸಿದ್ದಾರೆ.
ತುಮಕೂರು ಅಬಕಾರಿ ಎಸ್ಪಿ ಸತೀಶ ಕಾಗಲಿ ಅವರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿರುವ ಮನೆ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯ ಶ್ರೀನಗರದಲ್ಲಿರುವ ನಿವಾಸದ ಮೇಲೂ ರೇಡ್ ನಡೆಸಿ ಪರಿಶೀಲಿಸಿದ್ದಾರೆ.
ಮಂಜುನಾಥ್ ಅವರ ಮತ್ತೋರ್ವ ಆಪ್ತ ಚಿಕ್ಕೋಡಿ ಅಬಕಾರಿ ಡಿವೈಎಸ್ಪಿ ವಿಶ್ವನಾಥ ಗಾಣಿಗೆರ ಮನೆ ಮೇಲೆಯೂ ಇಡಿ ದಾಳಿ ನಡೆದಿದೆ. ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತದಲ್ಲಿ ದಾಖಲಾಗಿದ್ದ ಡಿಎ ಕೇಸ್ ಸಂಬಂಧ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ಗೆ ಸೇರಿ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 2013ರಲ್ಲಿ ಮೈಸೂರು ಅಬಕಾರಿ ಡಿಸಿಯಾಗಿದ್ದ ವೇಳೆಯೂ ಮಂಜುನಾಥ್ ಮೇಲೆ ಲೋಕಾಯುಕ್ತ ರೇಡ್ ಆಗಿತ್ತು. ಲೈಸೆನ್ಸ್ಗಳ ರಿನೀವಲ್ನಲ್ಲಿ ಅಕ್ರಮ ಹಣ ಸಂಪಾದನೆ ಆರೋಪ ಹಿನ್ನೆಲೆ ದಾಳಿ ನಡೆದಿದ್ದು, ಸಾಕಷ್ಟು ಹಣ ಮತ್ತು ಆಸ್ತಿ ಪತ್ತೆಯಾಗಿತ್ತು. ಈ ಸಂಬಂಧ ಇಲಾಖಾ ತನಿಖೆ ಮಂಜುನಾಥ್ ಮೇಲೆ ನಡೆದಿತ್ತು ಎಂಬುದು ಗೊತ್ತಾಗಿದೆ.



