Karnataka NewsLatestNationalPolitics

*ಖರ್ಗೆ ಕುಟುಂಬದಿಂದ 100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಭೂ ಕಬಳಿಕೆ: ಬಿಜೆಪಿ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಭ್ರಷ್ಟಾಚಾರ ಮತ್ತು ಭೂ ಅಕ್ರಮದ ಗಂಭೀರ ಆರೋಪಗಳನ್ನು ಮಾಡಿದೆ.

ಖರ್ಗೆ ಕುಟುಂಬದ ಒಡೆತನದ ‘ಸಿದ್ದಾರ್ಥ ವಿಹಾರ್ ಟ್ರಸ್ಟ್’ ಮೂಲಕ ಕರ್ನಾಟಕದಲ್ಲಿ ಬಡವರಿಗೆ ಮತ್ತು ಸರ್ಕಾರಕ್ಕೆ ಸೇರಿದ ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಪ್ರಮುಖ ಜಮೀನುಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಖರ್ಗೆ ಕುಟುಂಬದ ವಿರುದ್ಧ ಅಧಿಕಾರ ದುರುಪಯೋಗ ಮತ್ತು ಭೂ ಅಕ್ರಮದ ಆರೋಪಗಳನ್ನು ಹೊರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರು ಮುನ್ನಡೆಸುತ್ತಿರುವ ಖಾಸಗಿ ಟ್ರಸ್ಟ್‌ಗೆ ಕರ್ನಾಟಕದಲ್ಲಿ 100 ಕೋಟಿ ರೂ. ಮೌಲ್ಯದ ಪ್ರಮುಖ ಸರ್ಕಾರಿ ಜಮೀನನ್ನು ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
.
ಸಿದ್ದಾರ್ಥ ವಿಹಾರ್ ಟ್ರಸ್ಟ್’ನಲ್ಲಿ ಕೇವಲ ಖರ್ಗೆ ಕುಟುಂಬದ ಸದಸ್ಯರು ಮಾತ್ರ ಇದ್ದಾರೆ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ, ಖರ್ಗೆ ಅವರ ಅಳಿಯ ಮತ್ತು ಅವರ ಧರ್ಮಪತ್ನಿ ಸದಸ್ಯರಾಗಿದ್ದಾರೆ. ಇಡೀ ಕುಟುಂಬವೇ ಸೇರಿಕೊಂಡು ತಮ್ಮ ರಾಜಕೀಯ ಪ್ರಭಾವ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ವಿವಿಧೆಡೆ ಬಡವರ ಭೂಮಿಯನ್ನು ಲೂಟಿ ಮಾಡಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2024ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಸಂಶೋಧನೆ ಮತ್ತು ಅಭಿವೃದ್ಧಿ’ ಹೆಸರಿನಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಭಾರಿ ಮೌಲ್ಯದ 5 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಬೇಕಿದ್ದ ಈ ಜಮೀನನ್ನು ಖರ್ಗೆ ಅವರ ಖಾಸಗಿ ಟ್ರಸ್ಟ್‌ಗೆ ನೀಡಲಾಗಿದ್ದು, ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 100 ಕೋಟಿ ರೂ. ಎಂದು ಬಿಜೆಪಿ ಹೇಳಿದೆ.

ಕರ್ನಾಟಕ ಸರ್ಕಾರವು ಕಲ್ಬುರ್ಗಿಯಲ್ಲಿ ಬರೋಬ್ಬರಿ 19 ಎಕರೆ ಸರ್ಕಾರಿ ಜಮೀನನ್ನು ಖರ್ಗೆ ಅವರ ಖಾಸಗಿ ಟ್ರಸ್ಟ್‌ಗೆ ಪರಭಾರೆ ಮಾಡಿದೆ. ಸರ್ಕಾರದ ಆಸ್ತಿಯಾಗಿದ್ದ 19 ಎಕರೆ ಭೂಮಿ ರಾತ್ರೋರಾತ್ರಿ ಖರ್ಗೆ ಕುಟುಂಬದ ಖಾಸಗಿ ಸ್ವತ್ತಾಗಿ ಬದಲಾಗಿದೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಅಧಿಕಾರ ಬಳಸಿ ಈ ಭೂಮಿಯನ್ನು ಹೇಗೆ ಕಬಳಿಸಿದರು ಎಂಬುದಕ್ಕೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಪ್ರದೀಪ್ ಭಂಡಾರಿ ಆಗ್ರಹಿಸಿದ್ದಾರೆ.

“ಕಲ್ಬುರ್ಗಿಯಲ್ಲಿ ಜಮೀನೊಂದನ್ನು ಖರ್ಗೆ ಅವರ ಟ್ರಸ್ಟ್‌ಗೆ ಖಾಯಂ ಆಗಿ ವರ್ಗಾಯಿಸಿಕೊಳ್ಳಲು ನಕಲಿ ಮಾರಾಟಗಾರನನ್ನು ಸೃಷ್ಟಿಸಲಾಗಿತ್ತು. ಆ ಜಮೀನನ್ನು ಮಾರಾಟ ಮಾಡಿದ ಅಸಲಿ ವ್ಯಕ್ತಿ ಯಾರು ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಈ ರೀತಿಯಾಗಿ ಮೂರನೇ ವಿಧದ ಭ್ರಷ್ಟಾಚಾರದ ಮೂಲಕ ಭೂಮಿಯನ್ನು ಟ್ರಸ್ಟ್ ಹೆಸರಿಗೆ ಬರೆಸಿಕೊಳ್ಳಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button