Belagavi NewsBelgaum NewsCrimeKannada NewsKarnataka NewsTravel

*ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಕರ ಅಪಘಾತ: 3 ಸಾವು, ಹಲವರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಸಿಮೆಂಟ್ ಕಂಬಗಳನ್ನು ತುಂಬಿಕೊಂಡು ಶಿವಮೊಗ್ಗದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಲಾರಿ ಪಲ್ಟಿಯಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಕಿತ್ತೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗದಿಂದ ಬೆಳಗಾವಿ ಕಡೆಗೆ ಸಿಮೆಂಟ್ ಕಂಬಗಳನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿಯು ಬೆಳಿಗ್ಗೆ ಸುಮಾರು 2 ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತ ಸಂಭವಿಸಿದ ವೇಳೆ ಲಾರಿಯಲ್ಲಿ ಚಾಲಕ ಸೇರಿ ಒಟ್ಟು ಒಂಬತ್ತು ಕಾರ್ಮಿಕರು ಸಂಚರಿಸುತ್ತಿದ್ದರು.

ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಹಸನ್ಗಂಜ್ ತಾಲ್ಲೂಕಿನ ಕುರಸತ್ ಗ್ರಾಮದ ಆದಿಲ್ ಖಾನ್ (26), ಪವನ್ (26), ಹಾಗೂ ನಜೀರ್ ಖಾನ್ (25) ಮೃತಪಟ್ಟಿದ್ದಾರೆ. 

Home add -Advt

ಘಟನೆಯಲ್ಲಿ ಸೌರಭ ವರ್ಮಾ (23) ಹಾಗೂ ಶಿವಂ ಕುಮಾರ್ (22) ಗಾಯಗೊಂಡಿದ್ದು, ಅವರ ಕಾಲು ಮತ್ತು ತಲೆಗೆ ಗಾಯಗಳಾಗಿವೆ. ಇಬ್ಬರನ್ನೂ ಕಿತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಚಡಚಣ ಪಟ್ಟಣದ ನಿವಾಸಿ, ಲಾರಿ ಚಾಲಕ ದುರ್ಗಪ್ಪ ಮಾರುತಿ ಗಾಡಿವಡ್ಡರ (45), ಆಕಾಶ್ (18), ಸಂಜಯ್‌ ವಿಶ್ವಕರ್ಮ (20), ಅವನಿಶ್ ಕುಮಾ‌ರ್ (25) ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕಿತ್ತೂರು ಪೊಲೀಸ್‌ ಠಾಣೆಯ ಪಿಎಸ್‌ಐ ಭರತ್ ಎಸ್. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button