ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಮೂಲಕ ಸಾಲ ಪಡೆದ ಸದಸ್ಯರು ತಾವು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸಬಲೀಕರಣವನ್ನು ಸಾಧಿಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಾ.ವೀರೇಂದ್ರ ಹೆಗಡೆ ಕರೆ ನೀಡಿದರು.
ತಾಲ್ಲೂಕಿನ ಲಿಂಗನಮಠ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ
ನಮ್ಮೂರು ನಮ್ಮ ಕೆರೆ ಯೋಜನೆಯಡಿ ಅಭಿವೃದ್ಧಿಗೊಂಡ ಕೆರೆ ಲೋಕಾರ್ಪಣೆಗೊಳಿಸಿದ ಬಳಿಕ
ಗ್ರಾಮದಲ್ಲಿ ಆಯೋಜಿಸಿದ್ದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸಾಧನಾ ಸಮಾವೇಶ ಮತ್ತು
ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಯೋಜನೆ ರಾಜ್ಯಾದ್ಯಂತ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆಗಳ ಅಭಿವೃದ್ಧಿ
ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಈಗಾಗಲೇ ಸ್ಥಳೀಯ
ಗ್ರಾಮ ಪಂಚಾಯ್ತಿಗಳು, ಸ್ಥಳೀಯ ನಾಗರಿಕರು ಮತ್ತು ಯೋಜನೆಯ ಸಹಭಾಗಿತ್ವದಲ್ಲಿ 80
ಕೆರೆಗಳು ಅಭಿವೃದ್ಧಿಗೊಂಡಿವೆ. ಜಲಮೂಲಗಳ ಸಂರಕ್ಷಣೆಯಿಂದ ಮಾತ್ರ ನಮಗೆ ಅವಶ್ಯವಿರುವ
ನೀರನ್ನು ಪಡೆಯಲು ಸಾಧ್ಯವಾಗಿರುವ ಕಾರಣ ಪ್ರತಿಯೊಬ್ಬರೂ ಜಲಮೂಲಗಳ ಸಂರಕ್ಷಣೆಗೆ
ಮುಂದಾಗಬೇಕು ಎಂದರು.
ಧರ್ಮಸ್ಥಳ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮನೆಕೆಲಸಗಳಿಗೆ ಮಾತ್ರ
ಸೀಮಿತರಾಗಿದ್ದ ಗೃಹಿಣಿಯರಿಗೆ ಪ್ರಪಂಚ ಜ್ಞಾನ, ವ್ಯವಹಾರ ಜ್ಞಾನ, ಸ್ವಾವಲಂಬನೆ,
ಉಳಿತಾಯ ಮನೋಭಾವ ಮತ್ತಿತರ ಜೀವನ ಪರಿವರ್ತನೆ ತರುವ ಸಂಗತಿಗಳನ್ನು ಕಲಿಸುತ್ತಿದೆ.
ಮಹಿಳೆಯರ ಸಬಲೀಕರಣದತ್ತ ಹೆಜ್ಜೆ ಹಾಕುವ ಪ್ರಯತ್ನ ಯೋಜನೆಯಿಂದ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.
ಸಮಾವೇಶದಲ್ಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಸುಜ್ಞಾನ ನಿಧಿ ಶಿಷ್ಯವೇತನ ಮತ್ತು
ತಾಲ್ಲೂಕಿನ ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಯೋಜನೆಯ ವತಿಯಿಂದ ಮಂಜೂರಾದ
ಅನುದಾನಗಳ ಚೆಕ್ ವಿತರಿಸಿದರು.
ಶರಣರು ಲಿಂಗಪೂಜೆ ಮಾಡಿದ ಇಂತಹ ನಾಡಿನಲ್ಲಿ ಕಲಿಯುಗದ ಸಾಕ್ಷಾತ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ನಮ್ಮ ಖಾನಾಪುರ ತಾಲೂಕಿನ ಜನತೆಗೆ ಇಂದು ಆಗಿದೆ ಎಂದು ಡಾ. ಅಂಜಲಿ ನಿಂಬಾಳ್ಕರ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಚಿಕ್ಕಮುನವಳ್ಳಿ ಆರೂಢಮಠದ ಶಿವಪುತ್ರ ಶ್ರೀಗಳು ವಹಿಸಿದ್ದರು. ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಬಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಒಕ್ಕೂಟದ ಅಧ್ಯಕ್ಷೆ ಅನ್ನಪೂರ್ಣ ಬಾಗೇವಾಡಿ ಸೇರಿದಂತೆ ಯೋಜನೆಯ ಅಧಿಕಾರಿಗಳು, ಸಿಬ್ಬಂದಿ, ಸೇವಾ ಪ್ರತಿನಿಧಿಗಳು, ಲಿಂಗನಮಠ ಹಾಗೂ ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಶೀನಪ್ಪ ಮೂಲ್ಯ ಸ್ವಾಗತಿಸಿದರು. ಸಂತೋಷ ನಾಯ್ಕ ನಿರೂಪಿಸಿದರು. ರಿಯಾಜ್ ಅತ್ತಾರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ