Kannada NewsKarnataka NewsLatestPolitics

*30 ದಿನ – 50ಕ್ಕೂ ಹೆಚ್ಚು ಮಹತ್ವದ ನಿರ್ಧಾರಗಳು*

ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ಗೆ ಒಂದು ತಿಂಗಳು: ಅಭಿವೃದ್ಧಿ, ಆಡಳಿತ ಸುಧಾರಣೆಗೆ ಹಲವು ಮಹತ್ವದ ಹೆಜ್ಜೆಗಳು

ಪ್ರಗತಿವಾಹಿನಿ ಸುದ್ದಿ,ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ತಿಂಗಳು ಪೂರ್ಣಗೊಳಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೊದಲ 30 ದಿನಗಳಲ್ಲೇ ಆಡಳಿತಕ್ಕೆ ಹೊಸ ದಿಕ್ಕು ನೀಡುವ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.


ಜನಪರ ಆಡಳಿತ, ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ರೈತರ ಕಲ್ಯಾಣ, ಕಾನೂನು-ಸುವ್ಯವಸ್ಥೆ ಬಲಪಡಿಸುವುದು, ಭ್ರಷ್ಟಾಚಾರ ನಿಯಂತ್ರಣ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳು ಮತ್ತು ನೀತಿಪರ ನಿರ್ಧಾರಗಳನ್ನು ಸರ್ಕಾರ ಘೋಷಿಸಿದೆ.


ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಉಚಿತ ಬಸ್ ಪಾಸ್, 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆರು ತಿಂಗಳ ಗಡುವು, 2,500 ಚದರ ಅಡಿವರೆಗಿನ ಮನೆಗಳಿಗೆ ಒಸಿ ವಿನಾಯಿತಿ, ರಾಜ್ಯಾದ್ಯಂತ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ, ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ₹2,000 ಕೋಟಿ ಯೋಜನೆ ಸೇರಿದಂತೆ ಹಲವು ಮಹತ್ವದ ಘೋಷಣೆಗಳು ಮೊದಲ ತಿಂಗಳಲ್ಲೇ ಪ್ರಕಟಗೊಂಡಿವೆ.

Home add -Advt


ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲು ‘ಪ್ರಜಾಸೇವೆ’ ಸಚಿವಾಲಯ ಸ್ಥಾಪನೆ, ಸರ್ಕಾರಿ ಕಚೇರಿಗಳಲ್ಲಿ ಜಿಪಿಎಸ್ ಆಧಾರಿತ ಸಿಬ್ಬಂದಿ ಹಾಜರಾತಿ, ಭ್ರಷ್ಟಾಚಾರ ವಿರುದ್ಧ ವಿಶೇಷ ಸಹಾಯವಾಣಿ, ಜಿಲ್ಲೆಗೊಂದು ರೌಡಿ ನಿಗ್ರಹ ಪಡೆ, ಮೀಟರ್ ಬಡ್ಡಿ ಹಾಗೂ ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮಕ್ಕೂ ಸರ್ಕಾರ ಒತ್ತು ನೀಡಿದೆ.


ರೈತರ ಹಿತದೃಷ್ಟಿಯಿಂದ ಬಿತ್ತನೆ ಬೀಜ ಮತ್ತು ಗೊಬ್ಬರದ ಸಮರ್ಪಕ ಪೂರೈಕೆ, ಮಾವು ಬೆಳೆಗಾರರಿಗೆ ಪ್ರೋತ್ಸಾಹಧನ ಮುಂದುವರಿಕೆ, ಬರ ನಿರ್ವಹಣೆಗೆ ಸಿದ್ಧತೆ, ತುಂಗಭದ್ರಾ ಅಣೆಕಟ್ಟು, ಮೇಕೆದಾಟು ಯೋಜನೆ ಹಾಗೂ ನೀರಾವರಿ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಯೋಜನೆಗಳಿಗೆ ಅಗತ್ಯ ಸಹಕಾರ ಕೋರಲಾಗಿದೆ. ಮೆಟ್ರೋ, ಆರ್‌ಆರ್‌ಟಿಎಸ್, ನೀರಾವರಿ, ವಿಶೇಷ ಅನುದಾನ ಸೇರಿದಂತೆ ಹಲವು ವಿಷಯಗಳ ಕುರಿತು ಕೇಂದ್ರದೊಂದಿಗೆ ಸಮನ್ವಯ ಸಾಧಿಸಲಾಗಿದೆ.


ಕರಾವಳಿ ಪ್ರವಾಸೋದ್ಯಮ, ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣ, ನೂತನ ಸಿಎಸ್ಆರ್ ನೀತಿ, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, 2028ರೊಳಗೆ ನಶೆಮುಕ್ತ ಕರ್ನಾಟಕ ನಿರ್ಮಾಣ, ಸಾರ್ವಜನಿಕ ಯೋಜನೆಗಳಿಗೆ ಭೂಮಿ ನೀಡಿದ ರೈತರಿಗೆ ‘ವಾಲ್ ಆಫ್ ಗ್ರ್ಯಾಟಿಟ್ಯೂಡ್’ ನಿರ್ಮಾಣ ಸೇರಿದಂತೆ ಹಲವು ಹೊಸ ಉಪಕ್ರಮಗಳಿಗೂ ಸರ್ಕಾರ ಚಾಲನೆ ನೀಡಿದೆ.


ಒಟ್ಟಾರೆ, ಮೊದಲ ಒಂದು ತಿಂಗಳಲ್ಲೇ ಆಡಳಿತದ ವೇಗ ಹೆಚ್ಚಿಸುವುದು, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದು ಹಾಗೂ ಜನಪರ ಆಡಳಿತಕ್ಕೆ ಆದ್ಯತೆ ನೀಡುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ತನ್ನ ಕಾರ್ಯವೈಖರಿಯ ಸ್ಪಷ್ಟ ಸಂದೇಶ ನೀಡಿದೆ ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Back to top button