Kannada NewsLatestNational
*ಟೋಲ್ ಗೇಟ್ ಗೆ ಡಿಕ್ಕಿ ಹೊಡೆದ ಎಲ್ ಪಿಜಿ ಟ್ಯಾಂಕರ್: ಅನಿಲ ಸೋರಿಕೆಯಾಗಿ ಭೀಕರ ಸ್ಫೋಟ: ಐವರು ಸಾವು*

ಪ್ರಗತಿವಾಹಿನಿ ಸುದ್ದಿ: ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಟೋಲ್ ಬೂತ್ ಡಿವೈಡರ್ಗೆ ಡಿಕ್ಕಿ ಹೊಡೆದು ಗ್ಯಾಸ್ ಸೋರಿಕೆಯಾಗಿ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಐದು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಈ ದುರಂತ ಸಂಭವಿಸಿದೆ. ಜೂನ್ 26 ರಂದು ಮುಂಜಾನೆ ಸಂಭವಿಸಿದ ಈ ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾನ್ಪುರದಿಂದ ಪ್ರತಾಪ್ಗಢಕ್ಕೆ ಹೋಗುತ್ತಿದ್ದ ಎರಡು ಟ್ಯಾಂಕರ್ಗಳು ಟೋಲ್ ಪ್ಲಾಜಾ ಸಮೀಪಿಸುತ್ತಿದ್ದಾಗ, ಅದರಲ್ಲಿ ಒಂದು ಟ್ಯಾಂಕರ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡಿದೆ.
ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನೇರವಾಗಿ ಟೋಲ್ ಬೂತ್ಗೆ ನುಗ್ಗಿದೆ. ತಕ್ಷಣವೇ ಅನಿಲ ಸೋರಿಕೆಯಾಗಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಬೆಂಕಿಯ ಜ್ವಾಲೆಗಳು ಗೋಚರಿಸುತ್ತಿದ್ದವು. ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ.



