
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಎಸ್ಐಅರ್ ಪ್ರಕ್ರಿಯೆ ನಡೆಯುತ್ತಿರುವ ರೀತಿ ಕುರಿತು ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಈ ಕುರಿತು ಪ್ರತ್ಯೇಕ ಹೇಳಿಕೆ ನೀಡಿದ್ದಾರೆ.
ಮಸೀದಿಗಳಲ್ಲಿ ಕುಳಿತು SIR ಫಾರ್ಮ್ ಭರ್ತಿಯೇ?!
- ರಾಜ್ಯದಲ್ಲಿ SIR ಬೃಹತ್ ಹಗರಣ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ
- ನಿನ್ನೆ ರಾಮನಗರ, ಇಂದು ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ ಎಲ್ಲೆಡೆಯೂ ಅಕ್ರಮಗಳ ಸುರಿಮಳೆ
- ಕೇಂದ್ರ ಚುನಾವಣಾ ಆಯೋಗದ ನಿಯಮ ಗಾಳಿಗೆ ತೂರಿದೆ ರಾಜ್ಯ ಸರ್ಕಾರ
ನವದೆಹಲಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಕ್ರಮ ನಿನ್ನೆ ರಾಮನಗರ, ಇಂದು ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ. ಮಸೀದಿಗಳಲ್ಲಿ ಕುಳಿತು ಫಾರ್ಮ್ ಭರ್ತಿ…ಹೀಗೆ ರಾಜ್ಯಾದ್ಯಂತ SIR ಅಕ್ರಮಗಳ ಸುರಿಮಳೆಯಾಗುತ್ತಿದೆ. ಬೃಹತ್ ಹಗರಣವೇ ನಡೆಯುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಮಸೀದಿಯಲ್ಲಿ ಕುಳಿತು ಫಾರ್ಮ್ ಭರ್ತಿ ಮಾಡಿಕೊಡಲಾಗುತ್ತಿದೆ. ಸಾಲದ್ದಕ್ಕೆ ರಾಜಾರೋಷವಾಗಿ ವಾಟ್ಸಪ್ ಗ್ರೂಪ್ಗಳಲ್ಲಿ ಬಹಿರಂಗ ಪ್ರಚಾರ ಸಹ ಮಾಡಲಾಗುತ್ತಿದೆ. ತಕ್ಷಣವೇ ಇದಕ್ಕೆಲ್ಲ ಬ್ರೇಕ್ ಹಾಕಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.
ರಾಮನಗರ, ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವೆಡೆ SIR ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಕಾನೂನು ಬಾಹಿರವಾಗಿ, ವ್ಯವಸ್ಥಿತವಾಗಿ ಬೃಹತ್ ಅಕ್ರಮವೆಸಗಲಾಗುತ್ತಿದೆ ಎಂದು ಜೋಶಿ ಆಕ್ರೋಶ ಹೊರ ಹಾಕಿದ್ದಾರೆ.
SIR ಅಕ್ರಮ ಬಗ್ಗೆ ಫೋನ್ ಕರೆ:
ರಾಜ್ಯದಲ್ಲಿ ನಡೆಯುತ್ತಿರುವ ಈ ಬಗೆಯ SIRನಿಂದ ಕೇವಲ ನಿಯಮ ಉಲ್ಲಂಘನೆಯಲ್ಲ, ಪ್ರಜಾಪ್ರಭುತ್ವದ ಆಶಯಗಳಿಗೇ ವಿರುದ್ಧವಾಗಿದೆ. ನಿಯಮಗಳನ್ನೆಲ್ಲ ಗಾಳಿಗೆ ತೂರಿ ʼಮಸೀದಿಯಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್ಗಳನ್ನು ಭರ್ತಿ ಮಾಡುತ್ತಿರುವ ಬಗ್ಗೆʼ, ಅದನ್ನು ವಾಟ್ಸಪ್ಗಳಲ್ಲಿ ಹಂಚಿಕೊಳ್ಳುತ್ತಿರುವ ಅಕ್ರಮಗಳ ಬಗ್ಗೆ ರಾಜ್ಯದ ಅನೇಕ ಕಡೆಗಳಿಂದ ಫೋನ್ ಕರೆಗಳೂ ಬರುತ್ತಿವೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಮಸೀದಿಗಳಲ್ಲಿ ಫಾರ್ಮ್ ಭರ್ತಿ!:
SIR ನಿಯಮ ಪ್ರಕಾರ ಮತಗಟ್ಟೆ ಅಧಿಕಾರಿಗಳು (BLO) ಜಿಲ್ಲಾ ಚುನಾವಣಾಧಿಕಾರಿ (DEO/DC) ಅವರ ಕಟ್ಟುನಿಟ್ಟಿನ ನಿರ್ದೇಶನದಂತೆ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಖುದ್ದಾಗಿ ಗುರುತಿಸಬೇಕು. ಆದರೆ, ರಾಜ್ಯದಲ್ಲಿ ಅದರ ಹೊರತಾಗಿ ಮಸೀದಿಗಳಲ್ಲಿ ಪ್ರಕ್ರಿಯೆ ನಡೆಸುತ್ತಿರುವುದು ನಿಜಕ್ಕೂ ತೀವ್ರ ಆತಂಕಕಾರಿ ಬೆಳವಣಿಗೆ ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬೃಹತ್ ಹಗರಣವೇ ನಡೆಯುತ್ತಿದೆ. ಕೇಂದ್ರ ಚುನಾವಣಾ ಆಯೋಗದ (ECI) ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳಲು ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದಂತಿದೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ವಾರ್ಡ್-63, ಬೂತ್ ನಂ.16ರಲ್ಲಿ ಸಹ SIRನಲ್ಲಿ ನಿಯಮ ಬಾಹಿರ ಚಟುವಟಿಕೆ ನಡೆದಿದೆ. ಇಲ್ಲಿನ ಬಿಎಲ್ಒ ಮೇರಿ ರಾಮಚಂದ್ರ ಹರಪನಾಳ ಮನೆ ಮನೆಗೆ ತೆರಳದೆ ಸ್ಥಳವೊಂದರಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿರುವುದು ಸಾರ್ವಜನಿಕವಾಗಿ ಬಹಿರಂಗಗೊಂಡಿದೆ.
ರಾಜ್ಯದಲ್ಲಿ ಈ ಮಟ್ಟದಲ್ಲಿ ನಡೆಯುತ್ತಿರುವ SIR ಹಗರಣದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ? ಎಂಬುದನ್ನು ಬಯಲಿಗೆಳೆಯಲು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ SIR ಅಕ್ರಮ; ಹೆಚ್.ಡಿ.ಕುಮಾರಸ್ವಾಮಿ ಆರೋಪ
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ!!
ಮಾಧ್ಯಮಗಳಿಗೆ ವಿಡಿಯೋಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವರು
ರಾಮನಗರ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು; SIR ಮಾಡಲು ಹೊರಗಿನ ಅಧಿಕಾರಿಗಳಿಗೆ ಉಸ್ತುವಾರಿ ಕೊಡಿ
ಬೆಂಗಳೂರು 3 ಜುಲೈ 2026
ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ರಾಜ್ಯ ಸರಕಾರ ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಅಲ್ಲದೆ, ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದ ಸಚಿವರು; ಈ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ಖುದ್ದು ನಾನೇ ಹೋಗಿ ದೂರು ನೋಡುತ್ತೇನೆ. ಇಡೀ ಎಸ್ ಐಆರ್ ಅಕ್ರಮದ ಮೂಲ ಸೂತ್ರದಾರಿ ಈ ರಾಜ್ಯದ ಮುಖ್ಯಮಂತ್ರಿಯೇ ಆಗಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ತುರ್ತು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಬೆಂಗಳೂರು ನಗರದ ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಎಸ್’ಐಆರ್’ನ ಅಕ್ರಮ ಪ್ರಕ್ರಿಯೆಯ ವಿಡಿಯೋ ದಾಖಲೆಗಳ ಮಾಹಿತಿ ನೀಡಿ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.
ಈ ಸರಕಾರವು ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತದೆ. ಅವರನ್ನು ಹೆದರಿಸಿ ಬೆದರಿಸಿ ತನಗೆ ಬೇಕಾದ ಹಾಗೆ ಎಸ್ಐಆರ್ ಮಾಡಿಸಿಕೊಳ್ಳುತ್ತಿದೆ. ಆದ್ದರಿಂದ ಈ ಕೂಡಲೇ ರಾಜ್ಯದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು ಹಾಗೂ ಈವರೆಗೂ ಆಗಿರುವ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು. ರಾಮನಗರ ಬೆಂಗಳೂರ್ ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಕೇಂದ್ರ ಸಚಿವರು ಆಗ್ರಹಪಡಿಸಿದರು.
ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ನೇರವಾಗಿ ಕ್ಷೇತ್ರದ ಶಾಸಕರ ಸೂಚನೆಯ ಮೇರೆಗೆ ಅಕ್ರಮವಾಗಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪರಿಷ್ಕರಣೆ ಸಿಬ್ಬಂದಿ ಪರಸ್ಪರ ಶಾಮೀಲಾಗಿ ಪುಷ್ಕರಣೆಯನ್ನು ಸಂಪೂರ್ಣವಾಗಿ ತಿರುಚುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಹಾಗೂ ಸಿಬ್ಬಂದಿ ಮನೆಮನೆಗೂ ತೆರಳಿ ಮಾಹಿತಿ ಪಡೆಯುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಪರಿಷ್ಕರಣೆ ಸಿಬ್ಬಂದಿಯ ಮೇಲೆ ಒತ್ತಡ ತಂದು ತನಗೆ ಬೇಕಾದ ಹಾಗೆ ಮನಸೋ ಇಚ್ಛೆಯಂತೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿಸಿಕೊಳ್ಳುತ್ತಿದೆ. ಇದು ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ ಎಂದು ಅವರು ದೂರಿದರು.
ನಿನ್ನೆಯ ದಿನ ರಾಮನಗರದ ಛತ್ರದಲ್ಲಿ ಎಸ್ಐಆರ್ ಜಾತ್ರೆ ಮಾಡುತ್ತಿರುವ ದೃಶ್ಯಗಳನ್ನು ನಾನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆ. ಇವತ್ತು ಯಶವಂತಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮಾಧ್ಯಮಗಳ ಮುಂದೆ ಇಡುತ್ತಿದ್ದೇನೆ. ಸ್ವತಃ ಕ್ಷೇತ್ರದ ಶಾಸಕರ ಫೋಟೋಗಳನ್ನು ಮುಂದಿಟ್ಟುಕೊಂಡು ಎಸ್ಐಆರ್ ಮಾಡಲಾಗುತ್ತಿದೆ. ಇದು ಯಾವ ಸೀಮೆಯ ಎಸ್ಐಆರ್ ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಅಲ್ಲಿನ ಶಾಸಕರು ರಾತ್ರೋರಾತ್ರಿ ಚೆನ್ನೈಗೆ ಕದ್ದು ಹೋಗಿ ತಮ್ಮ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದು ಹೇಳಿ ಬಿಜೆಪಿ ಸೇರಿಕೊಂಡರು. ಅಲ್ಲಿ ಮೂರು ವರ್ಷ ಸಚಿವರಾಗಿ ಅಧಿಕಾರ ಅನುಭವಿಸಿದ ಮೇಲೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಕಡೆ ವಾಲಿದ್ದಾರೆ. ಇದು ಯಾವ ರೀತಿಯ ಡೆವಲಪ್ಮೆಂಟ್ ರಾಜಕೀಯವು ನನಗೆ ಗೊತ್ತಿಲ್ಲ. ಪಾಪ.. ಅವರು ಬಹಳ ಚೆನ್ನಾಗಿ ಮಾತನಾಡುತ್ತಾರೆ ಎಂದು ಸಚಿವರು ಟೀಕಿಸಿದರು.
ಈಗ ಯಶವಂತಪುರದಲ್ಲಿ ಶಾಸಕರ ಪುಸ್ತಕಗಳು, ಅವರೇ ಕೊಟ್ಟ ಮತದಾರರ ಪಟ್ಟಿಯನ್ನು ಇಟ್ಟುಕೊಂಡು ಅಧಿಕಾರಿಗಳು ಎಸ್ ಐಆರ್ ಮಾಡುತ್ತಿದ್ದಾರೆ. ಈ ಸರಕಾರ ಎಲ್ಲಾ ಅಧಿಕಾರಿಗಳಿಗೆ ಹೀಗೆಯೇ ಎಸ್ ಐಆರ್ ಮಾಡಬೇಕು ಎಂದು ತಯಾರು ಮಾಡಿ ಕಳಿಸಿದ್ದಾರೆ. ಇವತ್ತು ಯಶವಂತಪುರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ನಿಯಮಗಳಿಗೆ ಶುದ್ಧವಾಗಿ ನಡೆಸುತ್ತಿದ್ದ ಅಧಿಕಾರಿಯನ್ನು ನಮ್ಮ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಇಳಿಸಿಕೊಂಡಿದ್ದಾರೆ. ಆ ಅಧಿಕಾರಿ ನಮ್ಮ ಕಾರ್ಯಕರ್ತರಲ್ಲಿ ಸಾರಿ ಎಂದು ಕೇಳುತ್ತಾರೆ. ಆಮೇಲೆ ಇನ್ನೊಬ್ಬ ಅಧಿಕಾರಿ ಬಂದು ವಿಡಿಯೋ ಮಾಡಬೇಡಿ ಎಂದು ಹೇಳುತ್ತಾರೆ ಎಂದು ಕೇಂದ್ರ ಸಚಿವರು ಹರಿಹಾಯ್ದರು.
ಮತದಾರರ ಹುಂಡಿಯನ್ನೇ ಕಳ್ಳತನ ಮಾಡಲು ಹೊರಟಿದ್ದಾರೆ!:
ಮುಖ್ಯಮಂತ್ರಿಗಳು ಮಹಾನ್ ಎನ್ನುವಂತೆ ಭಾಷಣ ಬಿಗಿಯುತ್ತಾರೆ. ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಹುಂಡಿ ಕಳುವಿನ ಬಗ್ಗೆ ಮಾತಾಡುತ್ತಾರೆ. ಆದರೆ ಇವರೇ ಮಾಡುತ್ತಿರುವ ಮತದಾರರ ಪಟ್ಟಿಯ ಕಳುವಿನ ಬಗ್ಗೆ ಜಾಣಮೌನ ವಹಿಸುತ್ತಾರೆ. ಇವರು ನೇರವಾಗಿ ಮತದಾರರ ಹುಂಡಿಯನ್ನೇ ಕಳ್ಳತನ ಮಾಡಲು ಹೊರಟಿದ್ದಾರೆ. ಇದಕ್ಕೆ ಏನೆಂದು ಹೇಳಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಕೇಳಿದರು.
ಒಂದು ಕಡೆ ಸಂವಿಧಾನ ಪುಸ್ತಕ ತೆಗೆದುಕೊಂಡು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಇನ್ನೊಂದು ಕಡೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸುತ್ತಾರೆ. ಸಂವಿಧಾನವನ್ನೇ ಬುಡಮೇಲು ಮಾಡುವ ಜನ ಇವರು. ಅಂತಹ ಕೆಲಸಗಳಲ್ಲಿ ಇವರದು ಎತ್ತಿದ ಕೈ. ಕುಣಿಗಲ್, ಪಾವಗಡ, ಅರಕಲಗೂಡು, ಇಂಡಿ ಮುಂತಾದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಆಕ್ರಮಗಳನ್ನು ನಡೆಸುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ಈ ಸರಕಾರಕ್ಕೆ ಮರ್ಯಾದೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2014ರಲ್ಲಿ ನರೇಂದ್ರ ಮೋದಿ ಅವರ ಪ್ರಧಾನಿಗಳಾಗಿ ಸಂಸತ್ ಭವನ ಪ್ರವೇಶ ಮಾಡುವಾಗ ಕಟ್ಟಡದ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿದಂತೆ ಈ ರಾಜ್ಯದ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿ ವಿಧಾನಸೌಧದ ಮೆಟ್ಟಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದನ್ನು ನೋಡಿ ಈ ವ್ಯಕ್ತಿಯಲ್ಲಿ ಏನೋ ಬದಲಾವಣೆ ಆಗಿರಬೇಕು ಎಂದುಕೊಂಡಿದ್ದೆ. ಆದರೆ ಅದು ಕೇವಲ ನಾಟಕ ಎಂಬುದು ತಿಳಿಯಲು ಹೆಚ್ಚು ದಿನ ಬೇಕಾಗಿಲ್ಲ. ರಾಜ್ಯದಲ್ಲಿ ಈ ಎಸ್ಐಆರ್ ಹಳ್ಳಹಿಡಿದು ಹೋಗುತ್ತಿರುವುದಕ್ಕೆ ಈ ವ್ಯಕ್ತಿಗೆ ಮೂಲ ಸೂತ್ರಧಾರಿ ಎನ್ನುವುದು ಗೊತ್ತಾಯಿತು. ಇವರಿಗೆ ಮಾನ ಮರ್ಯಾದೆ ಇಲ್ಲ. ಬಹಳ ಬೇಸರದಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.
ಇಷ್ಟೆಲ್ಲಾ ಅಕ್ರಮಗಳನ್ನು ನಡೆಸುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರೂ ಪ್ರಜಾಸೇವಾ ಇಲಾಖೆ ಅಂತ ಮಾಡಿದ್ದಾರೆ. ಪ್ರಜಾಸೇವೆ ಎಂದರೆ ಮತದಾರರ ಪಟ್ಟಿಯನ್ನು ತಿರುಚುವುದಾ? ಇಂದು ತೀಕ್ಷ್ಣವಾಗಿ ಪ್ರಶ್ನಿಸಿದ ಅವರು; ಈವರೆಗೆ ಅಕ್ರಮಗಳನ್ನು ನಡೆಸಿರುವ ರಾಜ್ಯದ ಅಧಿಕಾರಿಗಳನ್ನೇ ಮುಂದುವರೆಸಿದರೆ ಆಗುವುದಿಲ್ಲ. ಇವರಿಂದ ಪರಿಷ್ಕರಣೆ ಪ್ರಕ್ರಿಯೆ ನಡೆದರೆ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬರುತ್ತದೆ ಎಂದು ಸಚಿವರು ಹೇಳಿದರು.
ಚುನಾವಣೆಯ ಬಗ್ಗೆ ಹೆಚ್ಡಿಕೆ ಒತ್ತಾಯ:
ನಾನು ಕೇಂದ್ರದ ಚುನಾವಣಾ ಆಯೋಗಕ್ಕೆ ಡಿಮಾಂಡ್ ಮಾಡುತ್ತೇನೆ, ರಾಮನಗರದ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ನಗರದ ಜಿಲ್ಲಾಧಿಕಾರಿ ಕಠಿಣ ಕ್ರಮ ಆಗಬೇಕು. ನಾವು ಜಿಲ್ಲಾಧಿಕಾರಿಗಳು, ನಮ್ಮ ಜವಾಬ್ದಾರಿಗಳೇನು ಎಂಬ ಕನಿಷ್ಠ ಪರಿಜ್ಞಾನ ಇವರಿಗೆ ಇದೆಯಾ? ನಾನೇ ಸ್ವತಃ ಕೇಂದ್ರದ ಚುನಾವಣಾ ಆಯುಕ್ತವನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ರಾಜ್ಯದ ಮತದಾರರ ಪಟ್ಟಿಯ ಪಟ್ಟಿಯ ಪರಿಷ್ಕರಣೆಯಿಂದ ಸ್ಥಳೀಯ ಅಧಿಕಾರಿಗಳನ್ನು ಹೊರಗಿಟ್ಟು ಹೊರಗಿನಿಂದ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ಮನಸ್ಸು ಇಚ್ಛೆ ಈ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಸಚಿವರು ದೂರಿದರು.
- ಎಸ್ಐಆರ್ ಅರ್ಜಿಗಳು ಬೀದಿಯಲ್ಲಿ ವಿತರಣೆ, ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ಮಾಡಿದ ಕಾಂಗ್ರೆಸ್: ಪ್ರತಿಪಕ್ಷ ನಾಯಕ ಆರ್.ಅಶೋಕ
ಬರಗಾಲದ ಲಕ್ಷಣ ಕಂಡರೂ ಸಚಿವರು ಭೇಟಿ ನೀಡುತ್ತಿಲ್ಲ, ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ
ಬೆಂಗಳೂರು, ಜುಲೈ 3
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಾಗಿ ಬಿಎಲ್ಒಗಳು ಬೀದಿಗಳಲ್ಲಿ ಎಸ್ಐಆರ್ ಅರ್ಜಿಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಬಾಂಗ್ಲಾ ಜನರನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ ಎಸ್ಐಆರ್ ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಉದ್ದೇಶ ಕೂಡ ಹೌದು. ಆದರೆ ಕಾಂಗ್ರೆಸ್ ಸರ್ಕಾರ ಬಾಂಗ್ಲಾ ಜನರ ಪಾಲಿಗೆ ಸ್ವರ್ಗವಾಗಿದೆ. ಈ ಮೊದಲು ಕೋಗಿಲು ಕ್ರಾಸ್ನಲ್ಲಿ ಬಾಂಗ್ಲಾ ಜನರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ಅದರ ವಿರುದ್ಧ ಬಿಜೆಪಿ ಹೋರಾಟ ನಡೆಸಿದ್ದಕ್ಕೆ ಅದನ್ನು ಕೈ ಬಿಟ್ಟಿದ್ದರು. ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಸುಮಾರು 20 ಲಕ್ಷ ಬಾಂಗ್ಲಾ ಜನರು ರಾಜ್ಯದಲ್ಲಿದ್ದಾರೆ. 2002 ರ ಮತದಾರರ ಪಟ್ಟಿಯಲ್ಲಿ ಈ ಬಾಂಗ್ಲಾ ಜನರ ಹೆಸರಿಲ್ಲ. ಆದ್ದರಿಂದ ಬಾಂಗ್ಲಾ ನಿವಾಸಿಗಳಿಗೆ ಹೆದ್ದಾರಿ ನಿರ್ಮಿಸಿಕೊಟ್ಟಿದ್ದು, ಹಜ್ ಭವನ, ಮಸೀದಿಗಳ ಮುಂದೆ ರಾಜಾರೋಷವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗುತ್ತಿದೆ. ಬಿಎಲ್ಒಗಳು ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕಿದ್ದರೂ ಪ್ರಸಾದ ಹಂಚಿದಂತೆ ಬೀದಿಯಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿದ್ದಾರೆ. ಅಧಿಕಾರಿಗಳು ಮನೆ ಗುರುತು ಮಾಡಿ ಅರ್ಜಿ ತುಂಬಿಸಿ, ಮರಳಿ ಅರ್ಜಿಯನ್ನು ಪಡೆಯಬೇಕು. ಆದರೆ ಕಾಂಗ್ರೆಸ್ ಮತಕ್ಕಾಗಿ ಬಾಂಗ್ಲಾ ಜನರನ್ನು ಪಟ್ಟಿಗೆ ಸೇರಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ದೂರಿದರು.
ಮಹದೇವಪುರ, ಬ್ಯಾಟರಾಯನಪುರದಲ್ಲಿ ಮಸೀದಿಗಳ ಮುಂದೆ ಗುಂಪುಗುಂಪಾಗಿ ಕುಳಿತು ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳಿಗೆ ಪತ್ರ ಬರೆದು ಅಕ್ರಮ ಮಾಡಲಾಗುತ್ತಿದೆ ಎಂದು ತಿಳಿಸುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸುತ್ತೇನೆ. ಒಂದು ಬಾರಿ ಬಾಂಗ್ಲಾ ನಿವಾಸಿಗಳು ಇಲ್ಲಿ ನೆಲೆಸಿದರೆ ಉಚಿತ ಸೌಲಭ್ಯ ನೀಡಬೇಕಾಗುತ್ತದೆ. ಇದರಿಂದಾಗಿ ನಮ್ಮ ದೇಶಕ್ಕೆ ಹೊರೆಯಾಗುತ್ತದೆ ಎಂದರು.
ಯಲಹಂಕದ ಒಂದು ಕಡೆ 2002 ರ ಮತದಾರರ ಪಟ್ಟಿಯ ದಾಖಲೆಗಳೇ ಸಿಗದಂತೆ ಮಾಡಲಾಗಿದೆ. ವೆಬ್ಸೈಟ್ನಲ್ಲಿ ಅದನ್ನು ಅಪ್ಲೋಡ್ ಮಾಡಿಲ್ಲ. ನಿರ್ದಿಷ್ಟ ಸಮುದಾಯಗಳನ್ನು ಗುರಿ ಮಾಡಿ ಇಂತಹ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಆದೇಶ ನೀಡಿ ಹಿರಿಯ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ. ಎಸ್ಐಆರ್ ವಿರೋಧಿಸುವ ಕಾಂಗ್ರೆಸ್, ಗ್ಯಾರಂಟಿ ಪಡೆಯಲು ಎಸ್ಐಆರ್ನಲ್ಲಿ ಹೆಸರು ನೋಂದಾಯಿಸಿ ಎಂದು ಕರೆ ನೀಡುತ್ತಿದೆ. ಈ ಮೂಲಕ ಬಾಂಗ್ಲಾ ನಿವಾಸಿಗಳನ್ನು ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಭಾರತೀಯರಿಗೆ ಮಾತ್ರ ಎಸ್ಐಆರ್ ಅನ್ವಯವಾಗುತ್ತಿದೆ. ಅನ್ನ ಹಾಕುವವರಿಗೆ ಮತ ಇದೆಯೇ ಹೊರತು ಕನ್ನ ಹಾಕುವವರಿಗೆ ಅಲ್ಲ ಎಂಬುದನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿದುಕೊಳ್ಳಬೇಕು ಎಂದರು.
ಹೊಸತನವಿಲ್ಲದ ಆಡಳಿತ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಾದರೂ ರಾಜ್ಯದಲ್ಲಿ ಹೊಸತನ ಬಂದಿಲ್ಲ. ಹಳೆ ಬಾಟಲ್ ಹೊಸ ಹೆಂಡ ಎನ್ನುವಂತಹ ಆಡಳಿತ ನೀಡುತ್ತಿದ್ದಾರೆ. ನೀರಿಲ್ಲವೆಂಬ ಕಾರಣಕ್ಕೆ ಬೆಳೆ ಬೆಳೆಯಬೇಡಿ ಎಂದು ಸಿಎಂ ರೈತರಿಗೆ ಕರೆ ನೀಡಿದ್ದಾರೆ. ಯಾವಾಗ ಬೆಳೆ ಬೆಳೆಯಬೇಕೆಂಬ ಜ್ಞಾನ ರೈತರಿಗೆ ಮೊದಲಿಂದಲೂ ಇದೆ. ಪ್ರಧಾನಿ ನರೇಂದ್ರ ಮೋದಿ ಚಿನ್ನದ ಬಳಕೆ ಕಡಿಮೆ ಮಾಡಿ ಎಂದಿದ್ದಕ್ಕೆ, ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಈಗ ಅದೇ ರೀತಿ ಮುಖ್ಯಮಂತ್ರಿಗಳು ಮಾತಾಡುತ್ತಿದ್ದಾರೆ. ಇವರಿಗೆ ಧೈರ್ಯವಿದ್ದರೆ ತಮಿಳುನಾಡಿಗೆ ಬೆಳೆ ಬೆಳೆಯಬೇಡಿ ಎನ್ನಬೇಕಿತ್ತು ಎಂದರು.
ಮೇಕೆದಾಟು ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯ ಕೈಗೊಂಡರೂ ಅದರ ವಿರುದ್ಧ ಸಿಎಂ ಮಾತಾಡಿಲ್ಲ. ಅದರ ಬದಲು ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆ. ಮೇಕೆದಾಟು ಯೋಜನೆಗೆ 10 ರೂ. ಕೂಡ ನೀಡಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಪರ ಇದ್ದಾರೆ ಎಂದರು. 4
ಬರಗಾಲದ ಲಕ್ಷಣ ಕಂಡುಬಂದರೂ ಜಲಸಂಪನ್ಮೂಲ ಸಚಿವರು ಬೆಂಗಳೂರಿಗೆ ಬಿಟ್ಟು ಹೊರಗೆ ಹೋಗಿಲ್ಲ. ತುಂಗಭದ್ರಾ ಕ್ರಸ್ಟ್ ಗೇಟ್ ಚಾಲನೆ ಕಾರ್ಯಕ್ರಮಕ್ಕೂ ಅವರು ಹೋಗಿಲ್ಲ. ಕೃಷಿ ಇಲಾಖೆಗೆ ಸಚಿವರೇ ಇಲ್ಲ. ಬರಗಾಲಕ್ಕೆ ಎಷ್ಟು ಪರಿಹಾರ ನಿಗದಿ ಮಾಡಿದ್ದಾರೆ, ಎಷ್ಟು ಕಡೆ ಭೇಟಿ ನೀಡಿದ್ದಾರೆ, ಕೇಂದ್ರ ಸರ್ಕಾರಕ್ಕೆ ಯಾವಾಗ ನಿಯೋಗ ಕಳುಹಿಸುತ್ತಾರೆ ಎಂದು ತಿಳಿಸಲಿ ಎಂದರು.
ಇದೇ ಅವಧಿಯಲ್ಲಿ ಕಳೆದ ವರ್ಷ 22 ಜಲಾಶಯಗಳಲ್ಲಿ 335.292 ಟಿಎಂಸಿ ನೀರು ಇತ್ತು. ಈಗ 66.099 ಟಿಎಂಸಿ ನೀರು ಇದೆ. ಹೀಗಿರುವಾಗ ಬೆಳೆ ಬೆಳೆಯಬಾರದು ಎಂದರೆ ರೈತರು ಏನು ಮಾಡಬೇಕು ಎಂದು ಸರ್ಕಾರವೇ ತಿಳಿಸಬೇಕು. ಆಲಮಟ್ಟಿ, ತುಂಗಭದ್ರ, ಹಿಡಕಲ್, ಭೀಮಾ ಎಲ್ಲ ಜಲಾಶಯಗಳಲ್ಲೂ ನೀರಿನ ಕೊರತೆ ಇದೆ. ಆಲಮಟ್ಟಿಯಲ್ಲಿ 20 ಟಿಎಂಸಿ, ತುಂಗಭದ್ರಾದಲ್ಲಿ 9 ಟಿಎಂಸಿ ಸೇರಿದಂತೆ ಪ್ರತಿ ಡ್ಯಾಮ್ಗಳಲ್ಲೂ ನೀರಿನ ಕೊರತೆ ಇದೆ. ಆದರೆ ಸರ್ಕಾರಕ್ಕೆ ಮಾತ್ರ ಲಂಚದ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಇಷ್ಟೊತ್ತಿಗೆ ಅಧ್ಯಯನ ನಡೆಸಿ, ರೈತರಿಗೆ ಪರಿಹಾರ ಸೂಚಿಸಬೇಕಿತ್ತು. ರೈತರನ್ನು ಕರೆಸಿ ಮಾತಾಡುವುದರ ಜೊತೆಗೆ, ಬೆಳೆ ಹಾನಿ ಪರಿಹಾರಕ್ಕೆ ಕೂಡಲೇ 10,000 ಕೋಟಿ ರೂ. ಮೀಸಲಿಡಬೇಕು. ಟಾಸ್ಕ್ ಫೋರ್ಸ್ ರಚಿಸಿ, ಗೋ ಶಾಲೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡುತ್ತಿದ್ದಾರೆ. ಹಿಂದಿನ ಸಚಿವರು ಹಾಳು ಮಾಡಿಟ್ಟಿದ್ದಾರೆ ಎಂದು ಅವರೇ ಹೇಳುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸಾ ಎಂದು ಪ್ರಶ್ನಿಸುವುದಾದರೆ, ಆ ಸೈನ್ಸ್ನ್ನು ಡಿ.ಕೆ.ಶಿವಕುಮಾರ್ ಅವರೇ ಮಾಡಿದ್ದಾರೆ ಎಂದರ್ಥ. ನಗರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ, ಆದರೆ ಆಡಳಿತ ವೈಫಲ್ಯವಿದೆ ಎಂದು ಅವರು ಹೇಳಿದ್ದಾರೆ. ಅಂದರೆ ಮೂರು ವರ್ಷದಲ್ಲಿ ಇವರದ್ದೇ ಆಡಳಿತ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ ಎಂದರು.
ಹೆಚ್ಚು ಹಣ ಬರುವ ಬಿಡಿಎ, ಬಿಎಂಆರ್ಡಿಎ ಮೊದಲಾದ ಸಂಸ್ಥೆಗಳನ್ನು ಸಿಎಂ ಇಟ್ಟುಕೊಂಡಿದ್ದು, ಉಳಿದವನ್ನು ಸಚಿವರಿಗೆ ನೀಡಿದ್ದಾರೆ. ಇದರ ನಡುವೆ ಇವರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸರ್ಕಾರ ಇನ್ನಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ ಎಂದರು.




