Kannada NewsKarnataka NewsLatestPolitics

*ಖರ್ಗೆ ಜತೆ ಸಿಎಂ ಡಿ.ಕೆ.ಶಿವಕುಮಾರ್ ಸಮಾಲೋಚನೆ;* *ರಾಹುಲ್ ಗಾಂಧಿ ವಾಪಸ್ ಬರೋದು ಇನ್ನಷ್ಟು ವಿಳಂಬ;* *ಸಚಿವಾಕಾಂಕ್ಷಿಗಳ ಕಾಯುವಿಕೆ ಮತ್ತಷ್ಟು ಉದ್ದ*


ಸಂಪುಟ ವಿಸ್ತರಣೆ ಕುರಿತು ಖರ್ಗೆ ಜತೆ ಸಿಎಂ ಡಿ.ಕೆ.ಶಿವಕುಮಾರ್ ಸಮಾಲೋಚನೆ ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಸಚಿವಾಕಾಂಕ್ಷಿಗಳ ಕಾಯುವಿಕೆ ಮತ್ತಷ್ಟು ಉದ್ದ

ಪ್ರಗತಿವಾಹಿನಿ ಸುದ್ದಿ,
ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶುಕ್ರವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಹುಕಾಲದಿಂದ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈ ಭೇಟಿ ರಾಜಕೀಯ ವಲಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ. ಸಂಪುಟಕ್ಕೆ ಹೊಸ ಸಚಿವರನ್ನು ಸೇರ್ಪಡೆಗೊಳಿಸುವ ಕುರಿತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಖರ್ಗೆ ಅವರನ್ನು ಭೇಟಿ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಸುದ್ದಿ ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿರುವ ಕಾರಣ ಸಂಪುಟ ವಿಸ್ತರಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಈ ಹಿಂದೆ ಅವರು ಜುಲೈ 5ರಂದು ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದ್ದರೂ, ಇದೀಗ ಜುಲೈ 10ರ ಬಳಿಕವೇ ವಾಪಸ್ಸಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯಿಂದ ಸಚಿವ ಸ್ಥಾನಾಕಾಂಕ್ಷಿಗಳ ನಿರೀಕ್ಷೆ ಇನ್ನಷ್ಟು ದೀರ್ಘವಾಗುವ ಸಾಧ್ಯತೆ ಇದೆ. ಅಲ್ಲದೆ, ರಾಜ್ಯ ಸರ್ಕಾರದ ಹಲವು ಪ್ರಮುಖ ಇಲಾಖೆಗಳು ಇನ್ನೂ ಪೂರ್ಣಾವಧಿ ಸಚಿವರಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಹೊಣೆಯನ್ನು ಮುಖ್ಯಮಂತ್ರಿ ಅವರೇ ನಿರ್ವಹಿಸುತ್ತಿದ್ದಾರೆ. ಇದರಿಂದ ಆಡಳಿತಾತ್ಮಕ ಒತ್ತಡವೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ವಾಪಸ್ಸಾದ ಬಳಿಕವೇ ಸಂಪುಟ ವಿಸ್ತರಣೆ ಕುರಿತ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Home add -Advt

Related Articles

Back to top button