*ಹಿರಿಯ ಜೀವಿ ಕಲಘಟಗಿ ಅವರ ಜೀವನ ಇವತ್ತಿನ ಯುವ ಪಿಳಿಗೆಗಳಿಗೆ ಮಾರ್ಗದರ್ಶನವಾಗಲಿ : ಕೆ ಎಚ್ ಚನ್ನೂರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ ಅವರು ಪ್ರತಿಯೊಬ್ಬ ಭಾರತೀಯ ಅದರಲ್ಲೂ ಬೆಳಗಾವಿ ನಾಗರಿಕರಾದ ನಮಗೆಲ್ಲ ಆದರ್ಶ ಪ್ರಾಯವಾಗಿದ್ದು, ನಾವೆಲ್ಲರೂ ಕೂಡ ಅವರಂತೆ ದೇಶ ಭಕ್ತರಾದರಲ್ಲಿ ಸಮೃದ್ಧ ರಾಷ್ಟ್ರವನ್ನು ನಿರ್ಮಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಕೆ ಏಚ್ ಚನ್ನೂರು ಸಂತಸ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ (ಜುಲೈ 4) ಜರುಗಿದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ ವ್ಯಕ್ತಿಗಳು ತಮ್ಮ ಜೀವನವನ್ನೇ ಮುಡಿಪಗಿಟ್ಟಿರುವ ಅನೇಕ ಉದಾಹರಣೆಗಳನ್ನು ನಾವೆಲ್ಲ ತಿಳಿದಿರುವ ವಿಷಯ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅಂದಿನ ನೈಜ ಘಟನೆಗಳನ್ನು ರಾಜೇಂದ್ರ ಕಲಘಟಗಿ ಅವರಿಂದ ಕೇಳಿ ತಿಳಿಯುತ್ತಿರುವುದು ಸಂತಸದ ಸಂಗತಿಯಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ ಅವರ ಮಾರ್ಗದರ್ಶನದಲ್ಲಿ ಇಂದಿನ ಯುವ ಪೀಳಿಗೆ ದೇಶ ಭಕ್ತರಾಗಿ ದೇಶಕ್ಕಾಗಿ ಒಳ್ಳೆಯ ಕೊಡುಗೆ ನೀಡುವಂತೆ ಕೆ.ಎಚ್.ಚನ್ನೂರ ಅವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಂಜಂತ್ರಿ ಅವರು ರಾಜೇಂದ್ರ ಕಲಗಟಗಿ ಅವರ ಪರಿಚಯವನ್ನು ಮಾಡಿದರು. 106 ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ ಅವರ ತಂದೆ ಧರ್ಮಪ್ಪ ತಾಯಿ ಕಮಲವ್ವ ಇವರಿಬ್ಬರ ಪುಣ್ಯ ಉದರದಲ್ಲಿ ದಿನಾಂಕ 23-10-1920 ರಂದು ಜನಿಸಿದರು. ಧರ್ಮಪ್ಪ ಅವರಿಗೆ ಒಟ್ಟು 7 ಜನ ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಜನ ಗಂಡು ಮಕ್ಕಳು ಅವರಲ್ಲಿ ರಾಜೇಂದ್ರ ಅವರು 2 ನೇ ಮಗನಾಗಿ ಜನ್ಮತಾಳಿದರು. ರಾಜೇಂದ್ರ ಕಲಘಟಗಿ ಅವರು 1940 ರಲ್ಲಿಯೇ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದ ಎಂಬ ಸಂಕಲ್ಪದೊಂದಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವಾಲಿ ಚನ್ನಪ್ಪ ನವರ ಹೋರಾಟದ ಪ್ರೇರಣೆಯಿಂದ ಪ್ರಭಾವಿತರಾಗಿ ವಿದ್ಯಾರ್ಥಿಗಳ ಮನದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ್ದರು.
ಮುಂಬೈಯಿಂದ ಬೆಳಗಾವಿಗೆ ಬರುತ್ತಿದ್ದ ಮಹಾತ್ಮ ಗಾಂಧಿಯವರ ಪತ್ರಗಳನ್ನು ಸ್ಥಳಿಯರಿಗೆ ಹಂಚುವ ಜವಾಬ್ದಾರಿ ಇವರದಾಗಿತ್ತು. 1943 ರ ಎಪ್ರಿಲ್ ತಿಂಗಳಲ್ಲಿ ಪತ್ರಗಳನ್ನು ಸ್ಥಳಿಯರಿಗೆ ಹಂಚುವಾಗ ನಗರದ ಕಾಂಗ್ರೆಸ್ ರಸ್ತೆಯಲ್ಲಿ ಪೋಲಿಸ್ ರ ಕೈಗೆ ಸಿಕ್ಕಿಬಿದ್ದು ಕ್ಯಾಂಪ ಠಾಣೆಗೆ ಕರೆದೊಯ್ದಿದ್ದರು. ನಂತರ ಪೋಲಿಸರು ಕೋಟೆಯಲ್ಲಿದ್ದ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧಿಶರು 7 ತಿಂಗಳು ಸಜೆ ವಿಧಿಸಿ ಹಿಂಡಲಗಾ ಕಾರ್ಯಾಲಯಕ್ಕೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾದ ತದನಂತರವೂ ತಮ್ಮ ಹೋರಾಟದ ಹಾದಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಂಡರು.
ಈ ರೀತಿಯಾಗಿ ಇವರು ತಮ್ಮ ಬದುಕಿನ ಜೀವನದಲ್ಲಿ ಮಹಾನ ಸ್ವಾತಂತ್ರ್ಯ ಹೋರಾಟಗಾರರಾಗಿ ಜೀವನ ಕಳೆದಿದ್ದಾರೆ. ಅಷ್ಟೇ ಅಲ್ಲದೇ ಇವರು ತಮ್ಮ ಇಳಿ ವಯಸ್ಸಿನಲ್ಲಿ ಯೋಗ, ಧ್ಯಾನ ಮಾಡುತ್ತಾ, ಆಶ್ರಮಗಳು, ವೃದ್ಧಾಶ್ರಮಗಳಿಗೆ ಸಹಾಯ ಮಾಡುತ್ತಿದ್ದಾರೆ, ಗ್ರಂಥಾಲಯಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುತ್ತಾರೆ ಮತ್ತು ಪ್ರತಿ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರೂ.5000 ಸಾವಿರ ಆರ್ಥಿಕ ಸಹಾಯ ಮಾಡುವುದರ ಮೂಲಕ ನಿರಂತರವಾಗಿ ಸಮಾಜ ಸೇವೆ ತೊಡಗಿಕೊಳ್ಳುವುದ ಮೂಲಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ ಅವರು ಮಾತನಾಡಿ ಸ್ವಾತಂತ್ರ್ಯ ಬಂದ ದಿನ ಪ್ರತಿಯೊಬ್ಬರು ಖುಷಿಯಿಂದ ಇರುವ ಸಮಯ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವತ್ತಿನ ಯುವಕರು ದುಶ್ಚಟಗಳಿಂದು ದೂರವಿದ್ದು, ತಪ್ಪು ದಾರಿಯಲ್ಲಿ ನಡೆಯದೆ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಲು ಹೇಳಿದರು.
1920 ರಲ್ಲಿ ನನ್ನ ಜನ್ಯವಾದರೂ ಕೂಡ ಗಾಂಧಿಯನ್ನೂ ಭೇಟಿ ಆಗುವ ಅವಕಾಶ ಸಿಗಲಿಲ್ಲ, ಬ್ರಿಟಿಷರು ಇಲ್ಲಿನ ಸಂಪತ್ತನ್ನು ವಿದೇಶಕ್ಕೆ ಕೊಂಡೊಯುತ್ತಿದ್ದರು, ಅದನ್ನ ತಡೆಯಲು ನನ್ನಂತ ಅನೇಕ ಜನರು ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದ್ದಾರೆ.
ಸ್ವತಂತ್ರ ಚಳುವಳಿಗೆ ಹೋಗಲು ಮನೆಯಲ್ಲಿ ಬಿಡುತ್ತಿರಲಿಲ್ಲ, ಆದರೂ ಅದನ್ನು ಮೀರಿ ಹೋಗುತ್ತಿದ್ದೆ, ಚಳುವಳಿಗಳಲ್ಲಿ ಭಾಗವಹಿಸಿದ್ದ ನನ್ನನು ಜೈಲಿಗೆ ಹಾಕಿದರು ಕೂಡ ಎದೆಗುಂದದೆ ಮತ್ತೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಹಿಸುತ್ತಿದ್ದ ಘಟನೆಯನ್ನು ಮೆಲಕು ಹಾಕಿದರು.
ಗಾಂಧಿ ಕಳಿಸಿದ ಕರ ಪತ್ರಗಳನ್ನು ಎಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತಿದ್ದೆ. ಯಾವುದೇ ಕೆಲಸ ಮಾಡಲು ನಮಗೆ ಭಯ ವಾಗುತ್ತಿರಲ್ಲಿ. ಅವತ್ತಿನ ದಿನಗಳಲ್ಲಿ ಜೈಲಿಗೆ ಹೋದರೆ ಹೆಮ್ಮೆ ಪಡುತ್ತಿದರು ಇಂದು ಜೈಲಿಗೆ ಹೋದರೆ ಯಾವುದೇ ಗೌರವ ಇಲ್ಲ. ಹಾಗಾಗಿ ತಪ್ಪು ದಾರಿಯಲ್ಲಿ ನಡೆಯುವ ಕಾರ್ಯ ಮಾಡದಿರಿ ಎಂದು ಬೆಳಗಾವಿಯ ಹಿರಿಯ ಸ್ವಾತಂತ್ರ್ಯ ಯೋಧರಾದ ರಾಜೇಂದ್ರ ಧರ್ಮಪ್ಪ ಕಲಘಟಗಿ ಅವರು ತಮ್ಮ 106 ನೇ ವಯಸ್ಸಿನಲ್ಲಿಯೂ ಕೂಡ ಅತ್ಯತ್ಸಾಹದಿಂದ ತಮ್ಮ ಸ್ವಾತಂತ್ರ್ಯ ಹೋರಾಟದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರು ವಾಯ್ ಬಿ ಹಿಮ್ಮಡಿ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



