Kannada NewsKarnataka NewsNationalPolitics

*ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಗೌಡ ನಿಧನ: ಗಣ್ಯರಿಂದ ಸಂತಾಪ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರಗೌಡ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಚಂದ್ರಾಲೇಔಟ್ ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 6.30 ಕ್ಕೆ ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಶಿಕ್ಷಣ, ರೇಷ್ಮೆ ವಿಜ್ಞಾನ ತಂತ್ರಜ್ಞಾನ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದರು. ಇಂದು ಅವರ ಕಾಮಾಕ್ಷಿ ಪಾಳ್ಯದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Home add -Advt

ಗಣ್ಯರ ಸಂತಾಪ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಸಂತಾಪ

ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣರು, ಮಾಜಿ ಸಚಿವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಾಮಚಂದ್ರ ಗೌಡ ಅವರ ಅಗಲಿಕೆಯ ಸುದ್ದಿ ತೀವ್ರ ಆಘಾತ ಮತ್ತು ನೋವುಂಟು ಮಾಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, “ಶ್ರೀ ರಾಮಚಂದ್ರ ಗೌಡರು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ಅಪರೂಪದ ಮುತ್ಸದ್ದಿ ನಾಯಕರು. ಸಚಿವರಾಗಿ, ಶಾಸಕರಾಗಿ ಅವರು ಜನಸಾಮಾನ್ಯರ ಪರವಾಗಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಅವರ ನಿಧನದಿಂದಾಗಿ ಪಕ್ಷಕ್ಕೆ ಹಾಗೂ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಕಂಬನಿ ಮಿಡಿದಿದ್ದಾರೆ. “ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶ್ರೀ ಪ್ರಲ್ಹಾದ್ ಜೋಶಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶಾಸಕ ಕೆ. ಗೋಪಾಲಯ್ಯ ಅವರ ಶ್ರದ್ಧಾಂಜಲಿ ಸಂದೇಶ

​”ಹಿರಿಯ ರಾಜಕಾರಣಿ, ಸದಾ ಸರಳ ಹಾಗೂ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಮಾಜಿ ಸಚಿವ ರಾಮಚಂದ್ರ ಗೌಡ ಅವರ ಅಗಲಿಕೆಯ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಪಕ್ಷದ ಸಂಘಟನೆಯಲ್ಲಿ ಮತ್ತು ಸಚಿವರಾಗಿ ನಾಡಿಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು.”

​ರಾಮಚಂದ್ರ ಗೌಡ ಅವರು ಕರ್ನಾಟಕ ರಾಜಕೀಯದಲ್ಲಿ ಮತ್ತು ಪಕ್ಷದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಸದಾ ಜನಪರ ಮತ್ತು ಅಭಿವೃದ್ಧಿ ಪರ ಚಿಂತನೆಯನ್ನು ಹೊಂದಿದ್ದ ಅವರು, ಯುವ ರಾಜಕಾರಣಿಗಳಿಗೆ ಸದಾ ಮಾರ್ಗದರ್ಶಕರಾಗಿದ್ದರು.

ಅವರ ನಿಧನದಿಂದಾಗಿ ರಾಜ್ಯ ರಾಜಕಾರಣಕ್ಕೆ ಹಾಗೂ ಪಕ್ಷಕ್ಕೆ ಒಬ್ಬ ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದ್ದು, ತುಂಬಲಾರದ ನಷ್ಟ ಉಂಟಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗದವರಿಗೆ, ಹಿತೈಷಿಗಳಿಗೆ ಮತ್ತು ಅಭಿಮಾನಿಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಶಾಸಕ ಕೆ. ಗೋಪಾಲಯ್ಯ ಅವರ ಕಾರ್ಯಾಲಯ

ದುಃಖ ವ್ಯಕ್ತ ಪಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಾಮಚಂದ್ರ ಗೌಡ ಅವರ ಅಗಲಿಕೆಯ ಸುದ್ದಿ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ 

ತಮ್ಮ ಸರಳ ವ್ಯಕ್ತಿತ್ವ, ಸಂಘಟನಾ ಕೌಶಲ್ಯ ಮತ್ತು ಕಾರ್ಯಕರ್ತರ ಮೇಲಿನ ಅಪಾರ ಕಾಳಜಿಯಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬದವರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

Related Articles

Back to top button