
ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಗೆ ಗರಂ ಆಗಿರುವ ಬಿಜೆಪಿ ಹೈಕಮಾಂಡ್ ಅವರಿಗೆ ವಿಚಿತ್ರ ಶಿಕ್ಷೆ ನೀಡಿದೆ.
ಮಹಾತ್ಮಾ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಅನಂತಕುಮಾರ ಹೆಗಡೆ ವಿರುದ್ಧ ಬಿಜೆಪಿ ಕೇಂದ್ರ ಸಮಿತಿ ಮತ್ತು ರಾಜ್ಯ ಘಟಕ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಬಿಜೆಪಿ ಶೋಕಾಸ್ ನೋಟೀಸ್ ನೀಡಿ ಸ್ಪಷ್ಟನೆ ಕೇಳಿದ್ದರೆ, ಕೇಂದ್ರ ಬಿಜೆಪಿ ಮತ್ತೊಂದು ಶಿಕ್ಷೆ ನೀಡಿದೆ. ನಾಳೆ ನಡೆಯಲಿರುವ ಸಂಸದೀಯ ಪಕ್ಷದ ಸಭೆಗೆ ಹಾಜರಾಗದಂತೆ ಅನಂತಕುಮಾರ ಹೆಗಡೆಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.
ಮಹಾತ್ಮಾ ಗಾಂಧಿಯವರದ್ದು ಬ್ರಿಟೀಶ್ ಜೊತೆಗಿನ ಒಪ್ಪಂದದ ಸ್ವಾತಂತ್ರ್ಯ ಹೋರಾಟವಾಗಿತ್ತು. ಒಂದೂ ಲಾಠಿ ಏಟು ತಿನ್ನದವರು ಮಹಾತ್ಮರಾದರೆ, ಪ್ರಾಣವನ್ನೇ ತೆತ್ತವರಿಗೆ ಯಾವುದೂ ಬೆಲೆ ಇಲ್ಲ ಎಂದು ಅನಂತ ಕುಮಾರ ಹೆಗಡೆ ಹೇಳಿಕೆ ನೀಡಿದ್ದರು.
ಭಾರತೀಯ ಜನತಾ ಪಾರ್ಟಿ ಮಹಾತ್ಮಾ ಗಾಂಧಿಯವರ 150ನೇ ಜನ್ಮ ವರ್ಷದ ಅಂಗವಾಗಿ ರಾಷ್ಟ್ರಾದ್ಯಂತ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ, ಇತ್ತ ಅನಂತಕುಮಾರ ಹೆಗಡೆ ವಿಚಿತ್ರ ಹೇಳಿಕೆ ಮೂಲಕ ಪಕ್ಷಕ್ಕೆ ಇರಿಸು ಮುರುಸನ್ನುಂಟುಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ