ಸೋತವರಿಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ: ರೇಣುಕಾಚಾರ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗೆದ್ದವರಿಗೆ ಸಚಿವ ಸ್ಥಾನ ನೀಡುವುದರಲ್ಲಿ ನಮಗೆ ಬೇಸರವಿಲ್ಲ. ಹಿಂದೆ ಸೋತ ಲಕ್ಷ್ಮಣ್ ಸವದಿಯವರನ್ನು ಉಪಮುಖ್ಯಮಂತ್ರಿ ಮಾಡಿದ್ದರು. ಇದೀಗ ಸೋತ ಮತ್ತೊಬರನ್ನು ಸಚಿವರನ್ನಾಗಿ ಮಾಡಲು ಹೊರಟಿರುವುದು ಬೇಸರದ ಸಂಗತಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರೆಸಾರ್ಟ್​​ ಅಥವಾ ಹೋಟೆಲ್​ನಲ್ಲಿ ಸೇರಿ ಮಾತನಾಡಿದರೆ ಭಿನ್ನಮತ ಮೂಡುತ್ತದೆ. ಇದು ಬಂಡಾಯ ಅಲ್ಲ, ಭಿನ್ನಮತವೂ ಅಲ್ಲ, ನಾಯಕರ ವಿರುದ್ಧ ಹೋರಾಟವೂ ಅಲ್ಲ. 11 ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೆಂದು ವರಿಷ್ಠರ ತೀರ್ಮಾನವಾಗಿದೆ. ನಾವಿಲ್ಲಿ ಸಾಮಾನ್ಯವಾಗಿ ಸೇರಿದ್ದೇವೆ ಅಷ್ಟೇ. ಗೆದ್ದವರಿಗೆ ಸಚಿವ ಸ್ಥಾನ ಕೊಡುವುದರಲ್ಲಿ ನಮಗೇನೂ ತಕರಾರಿಲ್ಲ. ಹಿಂದೆ ಸೋತವರಿಗೆ ಉಪಮುಖ್ಯಮಂತ್ರಿ ಮಾಡಿದರು. ಈಗ ಸೋತಿರುವ ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಡುತ್ತಿದ್ಧಾರೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಎಸ್​ ಯಡಿಯೂರಪ್ಪನವರಿಂದ. ಹಾಗಾಗಿ ಸೋತವರು ಕೂಡ ಬಿಜೆಪಿ ಅಧಿಕಾರಕ್ಕೆ ಬರಲು ನಾವೂ ಕಾರಣ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರೆಶ್ನಿಸಿದರು.

17 ಶಾಸಕರು ಮೈತ್ರಿ ಸರ್ಕಾರದ ನಡೆಗೆ ಬೇಸತ್ತು ಪಕ್ಷ ಬಿಟ್ಟು ಬಿಜೆಪಿಗೆ ಬಂದಿದ್ದಾರೆ. ಏನೇ ಆಗಲಿ ಸೋತವರಿಗೆ ಸಚಿವ ಸ್ಥಾನ ಕೊಡಬಾರದು ಎಂಬುದು ನನ್ನ ಆಗ್ರಹ ಅಷ್ಟೇ. ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಅನೇಕ ಜಿಲ್ಲೆಗಳಲ್ಲಿ ಸಮತೋಲನ ಕಾಪಾಡಬೇಕು. ಕೇವಲ ಬೆಳಗಾವಿ ಮತ್ತು ಬೆಂಗಳೂರಿಗೆ ಸರ್ಕಾರ ಸೀಮಿತ ಆಗಬಾರದು. ಸಿಎಂ ಯಡಿಯೂರಪ್ಪ ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button