ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಠ ಹಾಗೂ ವಿವಿಧ ಸಸ್ಥೆಗಳಿಗೆ ದಾಸೋಹ ಯೋಜನೆಯ ವೆಲ್ ಫೇರ್ ಸ್ಕೀಮ್ ಅಡಿ ನೀದಲಾಗುತ್ತಿದ್ದ ಅಕ್ಕಿ, ಗೋಧಿ ಆಹಾರ ಧಾನ್ಯಗಳನ್ನು ರಾಜ್ಯ ಸರ್ಕಾರವೇ ಸ್ಥಗಿತಗೊಳಿಸಿದ್ದು, ನವೆಂಬರ್ 12 ರಿಂದ ಡಿಸೆಂಬರ್ 27ವರೆಗೆ ಸರ್ಕಾರ ಮೂರು ಬಾರಿ ಆದೇಶವನ್ನು ಬದಲಿಸಿದೆ.
ಒಂದೂವರೆ ತಿಂಗಳಿನಲ್ಲಿ ಮೂರು ಬಾರಿ ಸರ್ಕಾರ ಆದೇಶ ಬದಲಾವಣೆ ಮಾಡಿದ್ದು, ಇದರ ಅನ್ವಯ ಪರಿಷ್ಕರಣೆ ಮಾಡಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಕೆಲವು ಕಲ್ಯಾಣ ಸಂಸ್ಥೆಗಳನ್ನು ಕೈ ಬಿಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠಕ್ಕೆ ನೀಡಲಾಗುತ್ತಿದ್ದ ಆಹಾರ ಧಾನ್ಯದ ಹಂಚಿಕೆ ನಿಲ್ಲಿಸಲಾಗಿದೆ ಎಂದು ತಿಳಿದ್ಬಂದಿದೆ.
ವೆಲ್ ಫೇರ್ ಸ್ಕಿಮ್ ಅನ್ವಯ ಉಚಿತ ವಸತಿ, ಊಟ ನೀಡುವ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿಯಂತೆ ಒಟ್ಟು 15 ಕೆಜಿ ಆಹಾರ ಧಾನ್ಯ ಹಂಚಿಕೆ ಮಾಡಲಾಗುತ್ತಿತ್ತು.
ಸರ್ಕಾರದ ಮೊದಲ ಆದೇಶದಲ್ಲಿ 12 ನವೆಂಬರ್ 2019 ಆದೇಶದಲ್ಲಿ ಅನುಮೋದಿತ 460 ಕಲ್ಯಾಣ ಸಂಸ್ಥೆಗಳ 41,384 ವಿದ್ಯಾರ್ಥಿಗಳಿಗೆ ತಲಾ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಕೊಡುವ ಆದೇಶ ಮಾಡಲಾಗಿದೆ. 13 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ ಒಟ್ಟು 176 ಕಲ್ಯಾಣ ಸಂಸ್ಥೆಗಳು, 11,762 ವಿದ್ಯಾರ್ಥಿಗಳಿಗೆ 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಆದೇಶಿಸಲಾಗಿದೆ. 27 ಡಿಸೆಂಬರ್ 2019ರ ಆದೇಶದಲ್ಲಿ ಅನುಮೋದಿತ 189 ಕಲ್ಯಾಣ ಸಂಸ್ಥೆಗಳಿಗೆ, 13785 ವಿದ್ಯಾರ್ಥಿಗಳಿಗೆ ಒಟ್ಟು 10 ಕೆಜಿ ಅಕ್ಕಿ 5 ಕೆಜಿ ಗೋಧಿ ಎಂದು ಒಟ್ಟು ಮೂರು ಆದೇಶ ಹೊರಡಿಸಲಾಗಿದೆ.
ಈ ಕುರಿತು ಮಾತನಾಡಿರುವ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ. ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ ಸಲ್ಲಿಸಿದ್ದೇವೆ. ಈ ಬಗ್ಗೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್, ದಾಸೋಹ ಯೋಜನೆ ಅಡಿ ಸಿದ್ದಗಂಗಾ ಮಠ ಸೇರಿದಂತೆ ವಿವಿಧ ಮಠದ ವಿದ್ಯಾರ್ಥಿಗಳಿಗೆ ಅಕ್ಕಿ, ಗೋಧಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಕಳೆದ ಮೂರು ತಿಂಗಳಿಂದ ಮಠಕ್ಕೆ ನೀಡುತ್ತಿದ್ದ ಅಕ್ಕಿಯನ್ನು ತಡೆ ಹಿಡಿದಿದೆ ಎಂದು ಪ್ರಮುಖ ದಾಖಲೆ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ