
ಪ್ರಗತಿವಾಹಿನಿ ಸುದ್ದಿ: ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಸ್ವರಣಲಿಂಗಂ ವಿಚ್ಛೇದನ ಅರ್ಜಿ ಹಿಂಪಡೆದಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಾಗೂ ಆ ಬಳಿಕ ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತಾ ನಡುವಿನ ದಾಂಪತ್ಯ ಬಿರುಕು ವಿಚಾರ ಹಾಗೂ ವಿಜಯ್ ಗೆಳತಿ ನಟಿ ತ್ರಿಷಾ ವಿಚಾರ ಭಾರಿ ಸುದ್ದಿಯಾಗಿತ್ತು. ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ವಿಚಾರಣೆಗಳು ಆರಂಭಗಿದ್ದವು. ಆದರೆ ಈಗ ಸಂಗೀತಾ ವಿಚ್ಛೆದನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಇಂದು ನಡೆದ ಕೋರ್ಟ್ ವಿಚಾರಣೆ ವೇಳೆ ಸಂಗೀತಾ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನು ವಜಾಗೊಳಿಸಿ ಆದೇಶಿಸಿದೆ. ಇಂದಿನ ವಿಚಾರಣೆ ವೇಳೆ ಸಂಗೀತಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅರ್ಜಿಯನ್ನು ಹಿಂಪಡೆಯಲು ಇರುವ ಕಾರಣಗಳನ್ನು ಕೋರ್ಟ್‌ಗೆ ವಿವರಿಸಿ ತಮ್ಮ ನಿರ್ಧಾರವನ್ನು ತಿಳಿಸಿದರು. ಇದನ್ನು ಆಲಿಸಿದ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ಪ್ರಕರಣವನ್ನು ಅಧಿಕೃತವಾಗಿ ರದ್ದುಗೊಳಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ಅವರು ತಮಿಳುನಾಡಿನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ದಂಪತಿಗಳ ನಡುವೆ ಸರಿಪಡಿಸಲಾಗದ ಭಿನ್ನಾಭಿಪ್ರಾಯಗಳಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ, ಶಾಶ್ವತ ಜೀವನಾಂಶ ಹಾಗೂ ಚೆನ್ನೈನ ನೀಲಂಕರೈನಲ್ಲಿರುವ ನಿವಾಸದಲ್ಲೇ ವಾಸಿಸಲು ಅನುಮತಿ ನೀಡಬೇಕೆಂದು ಕೋರಿದ್ದರು.
ಈ ವಿಚ್ಛೇದನ ಪ್ರಕರಣದ ವಿಚಾರಣೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಜೂನ್ 15ರಂದು ನಡೆದ ವಿಚಾರಣೆಯಲ್ಲೇ ಸಂಗೀತಾ ಅವರು ಅರ್ಜಿಯನ್ನು ಹಿಂಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆಗಲೂ ವೀಡಿಯೋ ಕಾನ್ಫರೆನ್ಸ್ ಮೂಲಕವೇ ಹಾಜರಾಗಿದ್ದ ಅವರು ತಮ್ಮ ನಿರ್ಧಾರ ತಿಳಿಸಿದ್ದರು. ತದನಂತರ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಸಂಗೀತಾ ವಿಚ್ಛೇದನ ಅರ್ಜಿ ಹಿಂಪಡೆದಿದ್ದು, ಪ್ರಕರಣ ರದ್ದಾಗಿದೆ. ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತಾ ಮತ್ತೆ ಒಂದಾಗಲಿದ್ದಾರೆ. ಅದೇನೇ ಇರಲಿ ಬಿರುಕು ಮೂಡಿದ್ದ ವಿಜಯ್-ಸಂಗೀತಾ ಬಾಳಲ್ಲಿ ಮತ್ತೆ ತಂಗಾಳಿ ಬೀಸಿದೆ. ಇಬ್ಬರೂ ಒಂದಾಗಿ ಬಾಳಲಿ ಎಂಬುದೇ ಎಲ್ಲರ ಹಾರೈಕೆ.




