EducationKarnataka NewsLatestPolitics

*ಮುಖ್ಯಮಂತ್ರಿಗಳೇ ಸೀಟು ಕೊಡಲು ಸೂಚಿಸಿದರೂ ಒಪ್ಪದ ಪ್ರಾಂಶುಪಾಲರು!ಶಾಲಾದಿನಗಳನ್ನು ಸ್ಮರಿಸಿದ ಸಿಎಂ*

Home add -Advt

ಪ್ರಗತಿವಾಹಿನಿ ಸುದ್ದಿ: ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಶಾಲೆಯ ಪ್ರಾಂಶುಪಾಲಾರಿಗೆ ಅವರ ಶಾಲೆಯಲ್ಲಿ ತಮಗೆ ಸೀಟು ಕೊಡಲು ಸೂಚಿಸಿದರೂ ಅವರು ನಿರಾಕರಿಸಿದ್ದ ಸ್ವಾರಸ್ಯಕರ ಘಟನೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಮರಿಸಿದರು.

ಗ್ರೇಟರ್ ಬೆಂಗಳೂರು ಐಟಿ ಕಂಪನಿಗಳು ಮತ್ತು ಕೈಗಾರಿಕೆಗಳ ಸಂಘದ (G BITCIA) ‘ವಿಷನ್ 2030 – ಸಿ.ಎಸ್.ಆರ್. ಸಮಾವೇಶ-2026’ ದಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಶಾಲಾ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಅವರ ಪೋಷಕರು ಕರೆತಂದಿದ್ದನ್ನು ನೆನಪಿಸಿಕೊಂಡ ಮುಖ್ಯಮಂತ್ರಿಗಳು ತಮ್ಮ ಶಾಲಾ ಹಂತದಲ್ಲಿ ಹಲವು ಶಾಲೆಗಳನ್ನು ಬದಲಾಯಿದ್ದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕನಕಪುರ ಮಾಜಿ ಶಾಸಕರು, ಶಿಕ್ಷಣ ತಜ್ಞರೂ ಆಗಿದ್ದ ಕರಿಯಪ್ಪ ಅವರು ನೆರವಾಗಿದ್ದರು ಎಂದು ತಿಳಿಸಿದರು. ಶಾಸ್ಕಾರ ಮೂಲಕ ಅಂದಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನ್ ಅವರು ಶಾಲಾ ಮುಖ್ಯಸ್ಥ ಗೋಪಾಲಕೃಷ್ಣ ಅವರಿಗೆ ಕರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ ಎಂದರು.

ನಂತರದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಬಳಿಗೆ ತೆರಳಿದಾಗಲೂ ಶಾಲೆಯ ಪ್ರಾಂಶುಪಾಲರು ಸೀಟು ನೀಡಲು ನಿರಾಕರಿಸಿದ್ದನ್ನು ಸ್ಮರಿಸಿದರು. ತಮಗೆ ಬೇಕಾಗಿದ್ದ ಶಾಲೆಯಲ್ಲಿ ಅಂದು ಮುಖ್ಯಮಂತ್ರಿಗಳಿಗೂ ಸೀಟು ಕೊಡಿಸಲು ಸಾಧ್ಯವಾಗದೇ ವಿದ್ಯಾವರ್ಧಕ ಶಾಲೆ ಪ್ರಾರಂಭಿಸಿದ್ದ ಸರ್ದಾರ್ ಪಟೇಲ್ ಶಾಲೆ’ ಎಂಬ ಹೊಸ ಶಾಲೆಗೆ ಸೇರ್ಪಡೆಯಾಗಿದ್ದ ಸ್ವಾರಸ್ಯಕರ ಘಟನೆಯನ್ನು ಮುಖ್ಯಮಂತ್ರಿಗಳು ಮೆಲುಕು ಹಾಕಿದರು.

ಕಲಿತ ಶಾಲೆಗೆ ನೆರವು
ಕಾವೇರಿ ಗಲಾಟೆಯ ಸಂದರ್ಭದಲ್ಲಿ 1. 30 ಲಕ್ಷ ಬೆಲೆಬಾಳುತ್ತಿದ್ದ ಕಂಪ್ಯೂಟರ್‌ಗಳು ಮತ್ತು ಎಲ್ಲಾ ದಾಖಲೆಗಳು ಸುಟ್ಟುಹೋದವು. ಸಚಿವನಾಗಿದ್ದಾಗ ನಾನು ಶಾಲೆಯ ಪುನರ್ ನಿರ್ಮಾಣಕ್ಕೆ ಕೈಲಾದಷ್ಟು ಬೆಂಬಲ ನೀಡಿದ್ದನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಿಎಸ್‌ಆರ್ ನಿಧಿಯ ಮೂಲಕ ಕೈಜೋಡಿಸಿ: ಸಿಎಂ ಡಿ ಕೆ ಶಿವಕುಮಾರ್ ಕರೆ

“ರಾಜ್ಯದ ಗ್ರಾಮೀಣ ಭಾಗದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಅತ್ಯುತ್ತಮ ಶಿಕ್ಷಣ ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ಉದ್ಯಮಗಳು ಸಿಎಸ್‌ಆರ್ ನಿಧಿಯ ಮೂಲಕ ಕೈಜೋಡಿಸುವುದು ಅತ್ಯಗತ್ಯ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ ನೀಡಿದರು.

“ಸಿಎಸ್‌ಆರ್ (CSR) ಕಾಯ್ದೆಗೆ ತಿದ್ದುಪಡಿ ತಂದ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ನಾವು ಸ್ಮರಿಸಬೇಕು. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಣಬ್ ಮುಖರ್ಜಿ ಅವರು ಈ ದೇಶಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದರು. ನಾವೆಲ್ಲರೂ ನಮಗಾಗಿ ಮಾತ್ರವಲ್ಲದೆ ಇತರರಿಗಾಗಿ ಬದುಕಬೇಕು ಎಂಬುದು ಸಿಎಸ್ಆರ್ ಉದ್ದೇಶ” ಎಂದರು.

2,000 ಸಿಎಸ್‌ಆರ್ (CSR) ಶಾಲೆಗಳನ್ನು ಅಭಿವೃದ್ಧಿಪಡಿಸುವ ಸಂಕಲ್ಪ

“ಕರ್ನಾಟಕಕ್ಕೆ ದಾನಧರ್ಮಗಳ ದೊಡ್ಡ ಪರಂಪರೆಯೇ ಇದೆ. ಸಾವಿರಾರು ವರ್ಷಗಳ ಹಿಂದೆಯೇ ಇಲ್ಲಿನ ಮಹಾನ್ ವ್ಯಕ್ತಿಗಳು ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಶಿಕ್ಷಣ ಹಾಗೂ ಉದ್ಯೋಗದ ಕಾರಣಕ್ಕಾಗಿ ಜನರು ನಗರಕ್ಕೆ ವಲಸೆ ಬರುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಗ್ರಾಮೀಣ ಭಾಗದಲ್ಲೇ ಗುಣಮಟ್ಟದ ಶಿಕ್ಷಣ ಸಿಗಬೇಕು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಆಯವ್ಯಯದಲ್ಲಿ 2,000 ಸಿಎಸ್‌ಆರ್ (CSR) ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಘೋಷಿಸಿದ್ದೇವೆ” ಎಂದರು.

ಸಿಎಸ್ಆರ್ ಸಮಾಜ, ಮಕ್ಕಳ ಭವಿಷ್ಯಕ್ಕೆ ಮಾಡುವ ಹೂಡಿಕೆ

“ಐಟಿ ಕಂಪನಿಗಳು ತಮ್ಮ ಹೆಸರಿನೊಂದಿಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು. ಉದಾಹರಣೆಗೆ, ಕಂಪನಿಯ ಹೆಸರು ಒಳಗೊಂಡಂತೆ ಶಾಲೆಗೆ ಬ್ರ್ಯಾಂಡಿಂಗ್ ಮಾಡಿಕೊಳ್ಳಲು ಅವಕಾಶವಿದೆ. ಕಂಪ್ಯೂಟರ್, ಲ್ಯಾಬ್, ವಾಹನ, ಕಟ್ಟಡ ಸೇರಿದಂತೆ ಯಾವುದೇ ರೂಪದಲ್ಲಿ ನೆರವು ನೀಡಬಹುದು. “ಸರ್ಕಾರದಿಂದ ಹಣ ಪಡೆದು ಮತ್ತೆ ಸರ್ಕಾರಕ್ಕೇ ಹಣ ನೀಡುವ ಅಗತ್ಯವಿಲ್ಲ. ನೀವೇ ಗುತ್ತಿಗೆದಾರರನ್ನು ಆಯ್ಕೆ ಮಾಡಿಕೊಂಡು ಶಾಲೆ ನಿರ್ಮಿಸಿ. ಸರ್ಕಾರ ಸ್ಥಳ ಮತ್ತು ಅಗತ್ಯ ಸಹಕಾರ ನೀಡಲಿದೆ” ಎಂದು ಹೇಳಿದರು.

“ಸಿಎಸ್ಆರ್ ಯೋಜನೆಗಳಲ್ಲಿ ಕೆಲ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಇನ್ಫೋಸಿಸ್, ವಿಪ್ರೋ ಸೇರಿದಂತೆ ಹಲವು ಸಂಸ್ಥೆಗಳ ಕಾರ್ಯವೈಖರಿಯ ಮಾಹಿತಿ ಸರ್ಕಾರದ ಬಳಿ ಇದೆ. ಉತ್ತಮ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನು ಪ್ರೋತ್ಸಾಹಿಸಲಾಗುವುದು. ತಮಿಳುನಾಡು ಗಡಿ ಭಾಗದಲ್ಲಿ ನಿರ್ಮಿಸಿರುವ ಮೂರು ಸರ್ಕಾರಿ ಶಾಲೆಗಳು ಮಾದರಿಯಾಗಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಇಂತಹ ಯೋಜನೆಗಳನ್ನು ವಿಸ್ತರಿಸಲಾಗುವುದು” ಎಂದರು.

“ಸಿಎಸ್ಆರ್ ಮೂಲಕ ಹಣ ನೀಡುವುದು ಕೇವಲ ಸರ್ಕಾರಕ್ಕೆ ಸಹಾಯ ಮಾಡುವುದಲ್ಲ. ಅದು ಸಮಾಜಕ್ಕೆ, ಮಕ್ಕಳ ಭವಿಷ್ಯಕ್ಕೆ ಮಾಡುವ ಹೂಡಿಕೆ. ಸಂಸ್ಥೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಬೆಂಗಳೂರು ಜಾಗತಿಕ ಜ್ಞಾನದ ರಾಜಧಾನಿ

“ಬೆಂಗಳೂರು ಇಂದು ಜಾಗತಿಕ ಮಟ್ಟದ ಜ್ಞಾನದ ರಾಜಧಾನಿಯಾಗಿದ್ದು, ಇಸ್ರೋ, ಹೆಚ್‌ಎಎಲ್, ನ್ಯಾಷನಲ್ ಲಾ ಸ್ಕೂಲ್, ಭಾರತೀಯ ವಿಜ್ಞಾನ ಸಂಸ್ಥೆ ಯಂತಹ ಅತ್ಯುನ್ನತ ಸಂಸ್ಥೆಗಳಿಗೆ ಬೆಂಗಳೂರು ತಾಣವಾಗಿದೆ” ಎಂದರು.

ರೈತರ ಬದುಕು, ಕೃಷಿಯ ಕಷ್ಟ ಅರಿಯಲು ಹೊಸ ಪಠ್ಯಕ್ರಮ

ನಗರದಲ್ಲಿ ಬೆಳೆಯುತ್ತಿರುವ ಮಕ್ಕಳು ಗ್ರಾಮೀಣ ಬದುಕು, ಕೃಷಿ ಮತ್ತು ರೈತರ ಶ್ರಮವನ್ನು ನೇರವಾಗಿ ಅರಿತುಕೊಳ್ಳಬೇಕು. ಈ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮೂಲಕ ವಿದ್ಯಾರ್ಥಿಗಳಿಗೆ ಮೂರು ದಿನ ಗ್ರಾಮವಾಸ ಕಡ್ಡಾಯಗೊಳಿಸುವಂತಹ ಪಠ್ಯಕ್ರಮ ರೂಪಿಸುವಂತೆ ಮನವಿ ಮಾಡಿದ್ದೇನೆ. ನಗರದ ಮಕ್ಕಳು ರಾಗಿ, ಗೋಧಿ ಸೇರಿದಂತೆ ಬೆಳೆಗಳು ಹೇಗೆ ಬೆಳೆಯುತ್ತವೆ, ಹಾಲು ಹೇಗೆ ಉತ್ಪಾದನೆಯಾಗುತ್ತದೆ, ರೈತರು ಎದುರಿಸುವ ಕಷ್ಟಗಳೇನು ಎಂಬುದನ್ನು ತಿಳಿದುಕೊಳ್ಳಬೇಕು. ಆಹಾರ ಉತ್ಪಾದಿಸುವ ರೈತರ ಶ್ರಮದ ಅರಿವಿಲ್ಲದೆ ನಗರ ಜೀವನ ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.

“ಒಂದು ಲೀಟರ್ ನೀರಿಗೆ ನಗರಗಳಲ್ಲಿ ₹ 30ರಿಂದ ₹ 40ವರೆಗೆ ಹಣ ನೀಡಲಾಗುತ್ತಿದೆ. ಆದರೆ ರೈತ ಉತ್ಪಾದಿಸುವ ಹಾಲಿಗೆ ಸುಮಾರು ₹ 40 ಸಿಗುತ್ತದೆ. ನೀರು ಮತ್ತು ಹಾಲಿನ ಬೆಲೆಯ ನಡುವಿನ ಈ ವ್ಯತ್ಯಾಸವೇ ರೈತರ ಪರಿಸ್ಥಿತಿಯನ್ನು ತೋರಿಸುತ್ತದೆ. ನಗರದ ಮಕ್ಕಳಿಗೆ ಹಾಲು, ತರಕಾರಿ, ಧಾನ್ಯಗಳು ನಮ್ಮ ಮನೆಗೆ ಹೇಗೆ ಬರುತ್ತವೆ ಎಂಬುದು ಗೊತ್ತಿಲ್ಲ. ಕೃಷಿಯಲ್ಲಿ ನೈಸರ್ಗಿಕ ಪದ್ಧತಿಗಳ ಮಹತ್ವವನ್ನು ಮತ್ತೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ” ಎಂದರು.

ಪ್ರತಿ ಖಾಸಗಿ ಶಾಲೆ ಒಂದು ಸರ್ಕಾರಿ ಶಾಲೆ ದತ್ತು ಪಡೆಯಲಿ

“ದೊಡ್ಡ ದೊಡ್ಡ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಕನಿಷ್ಠ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ಶಾಲೆಗಳು ಸಮಾಜದ ಜವಾಬ್ದಾರಿಯ ಭಾಗವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಶಿಕ್ಷಕರ ಗುಣಮಟ್ಟ, ಕಂಪ್ಯೂಟರ್, ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳು ಮುಂದೆ ಬರಬೇಕು” ಎಂದರು.

ಶೇ.25ರಷ್ಟು ಸೀಟುಗಳ ವ್ಯವಸ್ಥೆ

“ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಸೀಟು ನೀಡುವ ವ್ಯವಸ್ಥೆಯಿಂದ ಸರ್ಕಾರಕ್ಕೆ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಹಿಂದೆ ಈ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯುತ್ತಿದ್ದವು. ಹಣ ಪಡೆದು ಸೀಟು ಕೊಡಿಸುವುದು, ಮಧ್ಯವರ್ತಿಗಳ ಹಸ್ತಕ್ಷೇಪ ಸೇರಿದಂತೆ ಹಲವು ಸಮಸ್ಯೆಗಳಿದ್ದವು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ” ಎಂದರು.

ಸಿಎಸ್ಆರ್ ನಿಧಿ ಮೇಲೆ ಪ್ರತ್ಯೇಕ ನಿಗಾ

“ಸಿಎಸ್ಆರ್ ನಿಧಿಯನ್ನು ಸಂಸ್ಥೆಗಳು ಹೇಗೆ ಮತ್ತು ಎಲ್ಲಿ ಬಳಸುತ್ತಿವೆ ಎಂಬುದನ್ನು ಪರಿಶೀಲಿಸಲು ಪ್ರತ್ಯೇಕ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು. ಪ್ರತಿ ಸಂಸ್ಥೆಯ ಸಿಎಸ್ಆರ್ ಚಟುವಟಿಕೆಗಳ ಮೇಲೆ ಸರ್ಕಾರ ನಿಗಾ ವಹಿಸಲಿದೆ. ಹಣವನ್ನು ಸರ್ಕಾರದ ಮೂಲಕ ಪಡೆದು ಮತ್ತೆ ಬೇರೆ ಸಂಸ್ಥೆಗಳಿಗೆ ವರ್ಗಾಯಿಸುವ ವ್ಯವಸ್ಥೆ ಬೇಡ. ಸಂಸ್ಥೆಗಳೇ ನೇರವಾಗಿ ಶಾಲೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು” ಎಂದರು.

“ರಾಜ್ಯದಲ್ಲಿ ಪ್ರತಿವರ್ಷ ಸುಮಾರು ₹10,000 ಕೋಟಿ ಸಿಎಸ್ಆರ್ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಸಾಮರ್ಥ್ಯವಿದೆ. ಆದರೆ 2024–25ರಲ್ಲಿ ಸಿಎಸ್ಆರ್ ವೆಚ್ಚ ಸುಮಾರು ₹3,394 ಕೋಟಿ ಮಾತ್ರವಾಗಿದೆ. ಸಿಎಸ್ಆರ್ ನಿಧಿಯ ಸಂಪೂರ್ಣ ಸಾಮರ್ಥ್ಯವನ್ನು ಶಿಕ್ಷಣ ಮತ್ತು ಆರೋಗ್ಯದಂತಹ ಆದ್ಯತೆಯ ಕ್ಷೇತ್ರಗಳಿಗೆ ಬಳಸಿಕೊಳ್ಳಬೇಕು” ಎಂದು ಹೇಳಿದರು.

Related Articles

Back to top button