*ದೇಶಕ್ಕೇ ಮಾದರಿಯಾಗುವಂತೆ ಗಣೇಶ ಉತ್ಸವ ಆಚರಿಸೋಣ : ಡಿಸಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಹಳಷ್ಟು ವಿಶಿಷ್ಟವಾಗಿರುವ ಬೆಳಗಾವಿಯ ಗಣೇಶೋತ್ಸವವನ್ನು ಎಲ್ಲರ ಸಹಕಾರದಿಂದ ವ್ಯವಸ್ಥಿತವಾಗಿ ಸೌಹಾರ್ಧತೆಯಿಂದ ದೇಶಕ್ಕೇ ಮಾದರಿಯಾಗುವಂತೆ ಆಚರಿಸೋಣವೆಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಗುರುವಾರ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ಗಣೇಶ ಉತ್ಸವ ಆಚರಣೆ, ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಗಣೇಶ ಉತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಗಣೇಶ ಮೂರ್ತಿಕಾರರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಗಣೇಶೋತ್ಸವದ ಯಶಸ್ವಿಗಾಗಿ ಈಗಾಗಲೇ ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು ಕೈಜೋಡಿಸಿದ್ದು, ಗಣೇಶ ಚತುರ್ಥಿಗೆ ಸಾಕಷ್ಟು ಮುಂಚಿತವಾಗಿಯೇ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುವುದು.
ಮುಖ್ಯವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ಎಲ್ ಅಂಡ್ ಟಿ ಅವರಿಗೆ ತಿಳಿಸಲಾಗಿದೆ. ನಾನು ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕೆಲಸ ಮಾಡಿಸುತ್ತೇವೆ. ಗಣೇಶ ಮಂಡಳಿಗಳಿಗೆ ವಿದ್ಯುತ್ ಕರ ಭರ್ತಿಗಾಗಿ ಹಣಕಾಸಿನ ನೆರವು ನೀಡಲಾಗುವುದೆಂಬ ಭರವಸೆ ನೀಡಿದ ಆವರು, ಗಣೇಶ ಉತ್ಸವ ಮಂಡಳಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಗಣೇಶ ಉತ್ಸವವನ್ನು ಸೌಹಾರ್ದತೆಯಿಂದ ವಿಜೃಂಭಣೆಯಿಂದ ಆಚರಿಸೋಣವೆಂದು ಹೇಳಿದರು.

ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಮಾತನಾಡಿ, ನಗರದಲ್ಲಿ 14 ಲಕ್ಷ ಜನಸಂಖ್ಯೆ ಇದೆ.1400 ಪೊಲೀಸ್ ಹಾಗೂ 140 ಸಂಚಾರಿ ಸಿಬ್ಬಂದಿ ಇದ್ದಾರೆ
ದಿನನಿತ್ಯದ ರಕ್ಷಣಾ ಕಾರ್ಯಗಳ ಜೊತೆಗೆ ಗಣೇಶೋತ್ಸವ ಸಂದರ್ಭದಲ್ಲಿ ಸಿಬ್ಬಂದಿಗೆ ಹೆಚ್ಚಿನ ಕಾರ್ಯ ಭಾರವಿರುವುದು ಹಿನ್ನೆಲೆಯಲ್ಲಿ ಮಂಡಳಿಗಳ ಪದಾಧಿಕಾರಿಗಳು ಪೊಲೀಸರೊಂದಿಗೆ ಸಹಕರಿಸಬೇಕು. ಸೂಕ್ಷ್ಮ ಸ್ಥಳಗಳಲ್ಲಿ ನಿರಂತರ ಪೊಲೀಸ್ ಕಾವಲು ಹಾಕಲಾಗುವುದು. ಪೆಂಡಾಲಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಮೂರ್ತಿ ಎತ್ತರ, ವಿದ್ಯುತ್ ಅಲಂಕಾರ, ಪೆಂಡಾಲ್ ಸೇರಿದಂತೆ ಪೊಲೀಸರ ನಿಯಮಗಳನ್ನು ಪಾಲಿಸಬೇಕು. ಡಿಜೆ ನಿಷೇಧಿಸಲಾಗಿದ್ದು, ಅಶ್ಲೀಲ ಹಾಡುಗಳ ಪ್ರಸಾರ ಬೇಡ. ರಾತ್ರಿ ಹತ್ತರ ನಂತರ ಧ್ವನಿವರ್ಧಕಗಳ ಬಳಕೆಗೆ ಮಿತಿ ಇರಲಿ. ಒಟ್ಟಾರೆ ಯಾವುದೇ ಅವಘಡಗಳಾಗದಂತೆ ಗಮನಹರಿಸಬೇಕು ಎಂದು ಹೇಳಿದರು.
ಪಾಲಿಕೆ ಉಪಮೇಯರ ಹನುಮಂತ ಕೊಂಗಾಲಿ ಮಾತನಾಡಿ, ಗುಂಡಿಗಳನ್ನು ಮುಚ್ಚುವುದರೊಂದಿಗೆ ರಸ್ತೆ ದುರಸ್ತಿ, ನಗರ ಹಾಗೂ ಹೊಂಡಗಳ ಸ್ವಚ್ಛತೆಗೆ ಆದ್ಯತೆ ಕೊಡಲಾಗುವದು. ಪಾಲಿಕೆಯಿಂದ ವಿದ್ಯುತ್ ಕರ ಭರ್ತಿಗಾಗಿ
ಗಣೇಶ್ ಉತ್ಸವ ಎಲ್ಲ ಮಂಡಳಿಗಳಿಗೆ ಹಣಕಾಸಿನ ಅನುಕೂಲ ಮಾಡಲಾಗುವದು. ಗಣೇಶ ಉತ್ಸವದ ಯಶಸ್ವಿಗೆ ಪಾಲಿಕೆಯಿಂದ ಸಕಲ ಸಹಕಾರವನ್ನೂ ನೀಡಲಾಗುವುದೆಂದು ಹೇಳಿದರು.
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಮಾತನಾಡಿ, 11 ದಿನಗಳ ಗಣೇಶ ಉತ್ಸವದ ಸಕಲಸಿದ್ಧತೆಗೆ ಆದ್ಯತೆ ನೀಡುವುದರ ಜೊತೆಗೆ ಮೂರ್ತಿಗಳ ವಿಸರ್ಜನಾ ಸಂದರ್ಭದಲ್ಲಿ ಹೊಂಡಗಳ ಬಳಿ ಕ್ರೇನ್ ಗಳು, ತಂತ್ರಜ್ಞರು ಹಾಗೂ ಮುಳುಗು ತಜ್ಞರನ್ನು ನೇಮಿಸಲಾಗುವುದೆಂದು ಹೇಳಿದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್ ಮಾತನಾಡಿದರು.
ಮೇಯರ್ ಪ್ರೀತಿ ಕಾಮಕರ,
ಪ್ರೊಬೇಷನರಿ ಡಿಸಿ ರೋಹಿತ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಬಿ. ಬಸರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪಾಲಿಕೆ ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್, ವಿವಿಧ ಇಲಾಖೆಗಳ ಅಧಿಕಾರಿಗಳು, ವೇದಿಕೆಯಲ್ಲಿದ್ದರು.
ಗಣಪತಿ ಉತ್ಸವ ಮಹಾಮಂಡಳ ಅಧ್ಯಕ್ಷ ವಿಕಾಸ್ ಕಲಘಟಗಿ,ಉಪಾಧ್ಯಕ್ಷ ಸಾಗರ ಪಾಟೀಲ ಸೇರಿದಂತೆ ಇತರೆ ಪದಾಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಮನವಿ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದರು. ಪಾಲಿಕೆ ಪರಿಸರ ಅಭಿಯಂತರ ಹನುಮಂತ ಕಲಾದಗಿ ಸ್ವಾಗತಿಸಿ ವಂದಿಸಿದರು.ನಗರದ ಗಣೇಶ ಉತ್ಸವ ಮಂಡಳಿಗಳ ಪದಾಧಿಕಾರಿಗಳು ಮೂರ್ತಿಕಾರರು ಉಪಸ್ಥಿತರಿದ್ದರು.




