*ದೇಶದ ಪ್ರಗತಿಗೆ ಎಲ್ಲರ ಒಗ್ಗಟ್ಟು ಅಗತ್ಯ: ಧನಂಜಯ ಜೋಷಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸೈನಿಕನಿಗೂ ತನ್ನ ಸಮೀಪದಲ್ಲಿ ವೈದ್ಯರಿದ್ದಾರೆ ಎಂಬ ವಿಶ್ವಾಸವೇ ಧೈರ್ಯ ತುಂಬುತ್ತದೆ. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಕಾರ್ಯದಲ್ಲಿ ಸೇನಾ ವೈದ್ಯರು ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಸೈನಿಕರು ಮಾತ್ರವಲ್ಲದೆ ವೈದ್ಯರು, ವಿಜ್ಞಾನಿಗಳು, ಶಿಕ್ಷಕರು, ನಾಗರಿಕ ಸೇವಕರು, ಪೊಲೀಸರು, ಉದ್ಯಮಿಗಳು, ರೈತರು ಹಾಗೂ ಕಾರ್ಮಿಕರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವೂ ಸಮಾನವಾಗಿ ಮಹತ್ವದ್ದಾಗಿದೆ. ದೇಶದ ಪ್ರಗತಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಕಾನೂನು ಪಾಲನೆ, ಪರಿಸರ ಸಂರಕ್ಷಣೆ, ದುರ್ಬಲ ವರ್ಗಗಳ ಬಗ್ಗೆ ಕಾಳಜಿ ಇತ್ಯಾದಿ ಸಣ್ಣ ಸಣ್ಣ ಜವಾಬ್ದಾರಿಗಳೂ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆಯಾಗುತ್ತವೆ ಎಂದು ಇನ್ಫೆಂಟ್ರಿ ಸ್ಕೂಲನ ಜೂನಿಯರ ಲೀಡರ ವಿಂಗ್ ಕಮಾಂಡೆಂಟ ಮೇಜರ ಜನರಲ್ ಧನಂಜಯ ಜೋಷಿ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 80ನೇ ಸ್ವಾತಂತ್ರೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಅವರು, ಆ ಸಮಯದಲ್ಲಿ ನಗರದ ವೈದ್ಯಕೀಯ ಸೌಲಭ್ಯಗಳು ಸೀಮಿತವಾಗಿದ್ದವು. ಆದರೆ ಇಂದು ಬೆಳಗಾವಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ್ದು, ಅದರಲ್ಲೂ ಕೆಎಲ್ಇ ಸಂಸ್ಥೆಯ ಕೊಡುಗೆ ಅಪಾರವಾಗಿದೆ.
ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಶತಮಾನದಷ್ಟು ಕಾಲ ಸೇವೆ ಸಲ್ಲಿಸಿರುವ ಕೆಎಲ್ಇ ಸಂಸ್ಥೆಯು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಲ್ಲಿನ ವೈದ್ಯರ ಪರಿಣತಿ ದೇಶದ ಅತ್ಯುತ್ತಮ ಆಸ್ಪತ್ರೆಗಳಿಗೆ ಸಮಾನವಾಗಿದೆ. ಕಾಶ್ಮೀರದಲ್ಲಿರುವ ಸೇನೆಯ 92 ಬೇಸ್ ಆಸ್ಪತ್ರೆಗೆ ತಲುಪಿದ ಗಾಯಾಳು ಬದುಕುಳಿಯುತ್ತಾನೆ ಎಂಬ ವಿಶ್ವಾಸ ಜನರಲ್ಲಿ ಇದೆ. ಅದೇ ರೀತಿಯ ವಿಶ್ವಾಸ ಮತ್ತು ಉತ್ತಮ ಹೆಸರು ಕೆಎಲ್ಇ ಆಸ್ಪತ್ರೆಗಳಿಗೂ ದೊರೆತಿದೆ. ಯಾವುದೇ ಗಂಭೀರ ಅಥವಾ ಸಂಕೀರ್ಣ ಕಾಯಿಲೆಯೊಂದಿಗೆ ಬಂದ ರೋಗಿಗಳಿಗೆ ಇಲ್ಲಿ ಅತ್ಯುತ್ತಮ ಹಾಗೂ ಕಾಳಜಿಯುತ ಚಿಕಿತ್ಸೆ ದೊರೆಯುತ್ತದೆ ಎಂದು ಶ್ಲಾಘಿಸಿದರು.
ಕಾಹೆರನ ಉಪಕುಲಪತಿ ಡಾ. ಸಂದೀಪ ಶ್ರೀವಾತ್ಸವ ಅವರು ಮಾತನಾಡಿ, ವೈದ್ಯಕೀಯ ಶಿಕ್ಷಣವು ದೇಶದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಸಮುದಾಯಿಕ ಆರೋಗ್ಯಕ್ಕೆ ಪ್ರಾಧನ್ಯತೆ ನೀಡುತ್ತ ಸಮಾಜವನ್ನು ರೋಗಮುಕ್ತವಾಗಿಸುತ್ತಿವೆ. ಕನಸುಗಳು ನನಸಾಗಲು ಶಿಕ್ಷಣ ಅವಶ್ಯ. ಸಮಾಜದ ಆರೋಗ್ಯ ಕಾಪಾಡುವ ಜವಾದ್ಬಾರಿ ಆಸ್ಪತ್ರೆಗೆ ಮಾತ್ರ ಸೀಮಿತವಲ್ಲ. ಆರೋಗ್ಯ ಕಾಪಾಡಲು ಸದಾ ಬದ್ದರಾಗಿ ಕಾರ್ಯನಿರ್ವಹಿಸುತ್ತ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಗ್ರಾಮೀಣರ ಆರೋಗ್ಯ ಕಾಪಾಡುವದು ನಮ್ಮ ಕರ್ತವ್ಯ. ಅದಕ್ಕಾಗಿ ಸ್ವಚ್ಚತೆ ಬಹಳ ಮುಖ್ಯ. ದೇಶದ ಸ್ವಚ್ಚತೆ, ಎಲ್ಲರ ಜವಾದ್ಬಾರಿ, ಸ್ವಚ್ಚತೆಗೆ ಪ್ರತಿಜ್ಞೆ ಮಾಡಿ. ಪ್ರತಿಯೊಬ್ಬರೂ ದೇಶದ ನಿರ್ಮಾಣಕ್ಕೆ ಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಸ್ವಾಗತಿಸಿದರು. ಆಸ್ಪತ್ರೆಯು ಪ್ರಕಟಿಸುವ ಲೈಫ್ ಲೈನ್ ಹಾಗೂ ಫೋಕಸ್ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಕುಲಸಚಿವರಾದ ಡಾ. ವಿ ಎಂ ಪಟ್ಟಣಶೆಟ್ಟಿ ಜೆಎನ್ಎಂಸಿ ಪ್ರಾಚಾರ್ಯ ಡಾ. ರಾಜೇಶ್ ಪವಾರ, ಹೊಸ ಯೋಜನೆಗಳ ನಿರ್ದೇಶಕರಾದ ಡಾ. ವಿ ಡಿ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾವ್ಯಾ ಪಾಟೀಲ ನಿರೂಪಿಸಿದರು.



