*ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಸಾವು ಪ್ರಕರಣ: FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಅರಣ್ಯ ಸಿಬ್ಬಂದಿಗಳ ಗುಂಡೇಟಿಗೆ ಮೂವರು ಬೇಟೆಗಾರರು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವಾಪ್ತಿಯ ಹೊಳೆದಟ್ಟಿ ಅರಣ್ಯದಲ್ಲಿ ಮರಿಯ ಮಂಗಲ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಾಣಿ ಬೇಟೆಗೆ ಬಂದಿದ್ದಾರೆಂದು ಭಾವಿಸಿ ಅರಣಾಧ್ಯಿಕಾರಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದರು. ಮೃತರನ್ನು ಕುಮಾರ್,, ಪೀಟರ್, ಅಂಥೋಣಿ ಸ್ವಾಮಿ ಎಂದು ಗುರುತಿಸಲಾಗಿದೆ. ಮೃತ ಆಥೋಣಿಸಾಮಿ ಪತ್ನಿ ಲೂರ್ದಾಮೇರಿ ದೂರಿನ ಆಧಾರದಲ್ಲಿ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ವಲಯ ಐಜಿ ಬೋರಲಿಂಗೇಗೌಡ, ಚಾಮರಾಜನಗರ ಎಸ್ಪಿ ಮುತ್ತುತಾಜು ಸಮ್ಮುಖದಲ್ಲಿ ಅರಣ್ಯ ಅಧಿಕಾರಿಗಳು ಹನೂರು ವಿಭಾಗ ಎಂದು ಆರೋಪಿಗಳನ್ನಾಗಿಸಿ ಕೇಸ್ ದಾಖಲಿಸಲಾಗಿದೆ. ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಎಂದು ಎಫ್ಐಆರ್ನಲ್ಲಿ ನಮೂದಿಸಲಾಗಿದೆ. ಬಿಎನ್ ಎಸ್ 103(1) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
ಅಂಥೋಣಿಸ್ವಾಮಿ ಪತ್ನಿ ದೂರಿನಲ್ಲಿ ನಾವು ಹಸು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೆವು. ಆ.14 ರಂದು ನಮ್ಮ ಹಸುಗಳು ಕಾಡಿಗೆ ಮೇಯಲು ಹೋಗಿದ್ದವು. ಅವುಗಳು ವಾಪಸ್ ಬಂದಿರಲಿಲ್ಲ.ಹಸುಗಳನ್ನು ಹುಡುಕಿಕೊಂಡು ಬರಲು ನಿನ್ನೆ ಆಗಸ್ಟ್ 14ರ ಸಂಜೆ ನನ್ನ ಪತಿ ಆಥೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್, ದೊಡ್ಡಪ್ಪನ ಮಗ ಜೋಸೆಫ್ ತೆರಳಿದ್ದರು. ಬೆಳಿಗ್ಗೆಯಾದರೂ ಅವರು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ ಜೋಸೆಫ್ ಕರೆ ಮಾಡಿ ಘಟನೆ ವಿವರಿಸಿದ. ಮರಿಯಮಂಗಲ ಗ್ರಾಮದಿಂದ 4 ಕಿಮೀ ಕಾಡಿನಲ್ಲಿ ನಾವು ವಿಶ್ರಾಂತಿ ಮಾಡುತ್ತಾ ಮಲಗಿದ್ದೆವು. ಬೆಳಿಗಿನ ಜಾವ ಸುಮಾರು 3 ರಿಂದ 5 ಗಂಟೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ರು. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟರು. ನಾನು ತಪ್ಪಿಸಿಕೊಂಡು ಬಂದೆ ಎಂದು ಜೋಸೆಫ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.



