CrimeKannada NewsLatestNational

*ತಂದೆಯ ಹತ್ಯೆಗೆ ಮಗನಿಂದಲೇ ಸುಪಾರಿ*: *ಕಾನ್ಪುರದ ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಔಷಧ ವ್ಯಾಪಾರಿ ವಿನೀತ್ ಮನೋಚಾ (60) ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿ ದೊಡ್ಡ ತಿರುವು ಸಿಕ್ಕಿದೆ. ಆಸ್ತಿ ಬೇರೊಬ್ಬ ಮಹಿಳೆಯ ಪಾಲಾಗಬಹುದು ಎಂಬ ಭಯ ಹಾಗೂ ಸಾಲದ ಹೊರೆ ಕಾರಣಕ್ಕೆ ಸ್ವತಃ ಮಗನೇ ತಂದೆಯ ಹತ್ಯೆಗೆ ₹6 ಲಕ್ಷ ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪುತ್ರ ಸುಬ್ರತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 5ರಂದು ವಿನೀತ್ ಅವರ ಸ್ವಂತ ಫ್ಲಾಟ್‌ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಹತ್ಯೆ ನಡೆದ ದಿನ ವಿನೀಶ್‌ ಅವರ ಪುತ್ರ ಸುಬ್ರತ್ ತನ್ನ ಪತ್ನಿ ಶಾಲು ಜೊತೆ ಪಾರ್ಟಿಗೆ ತೆರಳಿದ್ದ. ಬಳಿಕ ತನಗೆ ಪ್ರಕರಣದ ಬಗ್ಗೆ ಏನೂ ತಿಳಿದಿಲ್ಲ ಎಂಬಂತೆ ವರ್ತಿಸಿದ್ದ ಘಟನೆ ಉತ್ತರ ಪ್ರದೇಶದ ಕಾನ್ಪುರದ ಇಂದಿರಾ ನಗರದಲ್ಲಿ ನಡೆದಿತ್ತು.

ಆರಂಭದಲ್ಲಿ ಪೊಲೀಸರು ವಿನೀತ್ ಅವರ ಸೊಸೆ ಶಾಲು, ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಹಾಗೂ ಆತನ ಸಹಚರ ರಾಜ್‌ಕಿಶೋರ್ ಅವರನ್ನು ಬಂಧಿಸಿದ್ದರು. ಆದರೆ ಕರೆ ದಾಖಲೆಗಳು, ಮೊಬೈಲ್ ಲೊಕೇಶನ್ ಹಾಗೂ ಇತರ ವೈಜ್ಞಾನಿಕ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಪ್ರಕರಣದ ಹಿಂದಿನ ಪ್ರಮುಖ ಸೂತ್ರಧಾರ ಸುಬ್ರತ್ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ವಿಚಾರಣೆ ವೇಳೆ ಸುಬ್ರತ್ ತಂದೆಯ ಹತ್ಯೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೀತ್ ಅವರಿಗೆ ಹಲವು ಮಹಿಳೆಯರೊಂದಿಗೆ ನಂಟಿತ್ತು. ಅವರು ಬೇರೊಬ್ಬ ಮಹಿಳೆಯೊಂದಿಗೆ ವಾಸಿಸಲು ತೆರಳಿ ತಮ್ಮ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದುಕೊಡಬಹುದು ಎಂಬ ಆತಂಕ ಸುಬ್ರತ್‌ಗೆ ಇತ್ತು.

ಇದರ ಜೊತೆಗೆ ಸುಬ್ರತ್ ಸಾಲದ ಸುಳಿಯಲ್ಲಿದ್ದ ಎನ್ನಲಾಗಿದೆ. ತಂದೆ ಪ್ರತಿ ತಿಂಗಳು ₹40 ಸಾವಿರ ಖರ್ಚಿಗೆ ನೀಡುತ್ತಿದ್ದರೂ, ಸುಬ್ರತ್ ಮಾಡಿಕೊಂಡಿದ್ದ ಸಾಲದ EMI ಕಂತುಗಳ ಮೊತ್ತವೇ ತಿಂಗಳಿಗೆ ₹55 ಸಾವಿರದಷ್ಟಿತ್ತು. ಹೀಗಾಗಿ ತಂದೆಯನ್ನು ಹತ್ಯೆ ಮಾಡಿ ಆಸ್ತಿಯನ್ನು ಪಡೆಯಲು ಆತ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಮಾಜಿ ಉದ್ಯೋಗಿ ವಿಶಾಲ್ ಗೌತಮ್‌ಗೆ ₹6 ಲಕ್ಷ ನೀಡುವುದಾಗಿ ಹೇಳಿ ಸುಬ್ರತ್ ತಂದೆಯ ಹತ್ಯೆಗೆ ಸುಪಾರಿ ನೀಡಿದ್ದ. ಒಂದು ವೇಳೆ ಪೊಲೀಸರು ತಮ್ಮನ್ನು ಬಂಧಿಸಿದರೆ ಪತ್ನಿ ಶಾಲು ಅವರ ಹೆಸರನ್ನು ಹೇಳುವಂತೆ ವಿಶಾಲ್‌ಗೆ ಸುಬ್ರತ್ ಸೂಚಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಹತ್ಯೆಗೆ ಎರಡು ದಿನಗಳ ಮೊದಲು ಖರೀದಿಸಲಾಗಿದ್ದ ಹೊಸ ಸಿಮ್ ಕಾರ್ಡ್‌ನಿಂದ ವಿಶಾಲ್ ಮತ್ತು ಸುಬ್ರತ್ ನಡುವೆ ಆರು ಬಾರಿ ಕರೆಗಳು ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇಬ್ಬರ ಮೊಬೈಲ್ ಲೊಕೇಶನ್ ಹಾಗೂ ಡಿಲೀಟ್ ಮಾಡಲಾಗಿದ್ದ ಚಾಟ್‌ಗಳನ್ನು ಸೈಬರ್ ಪೊಲೀಸರು ಮರುಪಡೆಯುವ ಮೂಲಕ ಪ್ರಕರಣದ ಸಂಚನ್ನು ಬಯಲಿಗೆಳೆದಿದ್ದಾರೆ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.

ಆರಂಭದಲ್ಲೇ ಬಂಧನಕ್ಕೊಳಗಾಗಿದ್ದ ಪತ್ನಿ ಶಾಲು, ಹತ್ಯೆ ಸಂಚಿನ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಪತಿಗೆ ಹತ್ಯೆ ಸಂಚಿನ ಬಗ್ಗೆ ಮೊದಲೇ ತಿಳಿದಿತ್ತೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿದಿದ್ದು, ಸದ್ಯಕ್ಕೆ ಆಕೆಗೆ ಪೊಲೀಸರು ಕ್ಲೀನ್ ಚಿಟ್ ನೀಡಿಲ್ಲ.

ಹತ್ಯೆಯನ್ನು ಸಹಜ ಸಾವು ಅಥವಾ ಆಕಸ್ಮಿಕ ಘಟನೆ ಎಂಬಂತೆ ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಆದರೆ ವಿಧಿವಿಜ್ಞಾನ ಪರೀಕ್ಷೆ, ಸಿಸಿಟಿವಿ ದೃಶ್ಯಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಯಿಂದ ಪ್ರಕರಣದ ಅಸಲಿ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತ ಸುಬ್ರತ್ ಸೇರಿದಂತೆ ಆರೋಪಿಗಳ ವಿರುದ್ಧ ಕೊಲೆ ಹಾಗೂ ಕೊಲೆಗಾಗಿ ಪಿತೂರಿ ಸೇರಿದಂತೆ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Related Articles

Back to top button