
ಪ್ರಗತಿವಾಹಿನಿ ಸುದ್ದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ಸೈಟ್ ಕ್ಲೀನಿಂಗ್ ವೇಳೆ ಮಹಿಳೆಯೊಬ್ಬರ ಬರ್ಬರ ಹತ್ಯೆ ರಹಸ್ಯ ಬಯಲಾಗಿದೆ.
ಖಾಲಿ ಸೈಟ್ ಗಳನ್ನು ಕ್ಲೀನ್ ಮಾಡುವಂತೆ ಜಿಬಿಎ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಸೈಟ್ ಮಾಲೀಕರು ಸೈಟ್ ಕ್ಲೀನ್ ಮಾಡಿಸಲು ಹೋದಾಗ, ಹಾಸಿಗೆಯಲ್ಲಿ ಸುತ್ತಿ ಎಸೆಯಲಾಗಿದ್ದ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಕಂಗಾಲಾದ ಮಾಅಲೀಕರು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮಹಿಳೆಯ ಶವ ಹಾಗೂ ಅದರ ಮೇಲಿನ ಬಟ್ಟೆಯನ್ನು ಪರಿಸ್ಜೀಲಿಸಿದ್ದಾರೆ. ಈ ವೇಳೆ ವೇಳೆ ಶವದ ಮೇಲಿದ್ದ ‘ವಿಶಾಲ್ ಮಾರ್ಟ್’ ಬಟ್ಟೆಯ ಟ್ಯಾಗ್ ಪೊಲೀಸರ ಪಾಲಿಗೆ ಮುಖ್ಯ ಸುಳಿವು ನೀಡಿದಂತಾಗಿದೆ.
ಆ ಟ್ಯಾಗ್ ಆಧಾರದ ಮೇಲೆ ಮೃತರ ಸಂಪರ್ಕ ಸಂಖ್ಯೆ ಪತ್ತೆಹಚ್ಚಿದ ಪೊಲೀಸರು ಮೃತ ಮಹಿಳೆ ಅನುಸೂಯ ಎಂದು ಪತ್ತೆ ಮಾಡಿದ್ದಾರೆ. ಆಕೆಯ ಪತಿ ಬಗ್ಗೆ ಹಾಗೂ ಗಂಡ ಹೆಂಡತಿ ನಡುವೆ ಆಗಾಗ ಜಗಳ ವಾಗುತ್ತಿದ್ದ ಬಗ್ಗೆಯೂ ಪತ್ತೆ ಮಾಡಿದ್ದಾರೆ.
ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಅನಸೂಯ ಪತಿ ಸಾಗರ್ ಚಂದ್ರ ರಾವತ್ (32) ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಈತ ತನ್ನ ಪತ್ನಿ ಅನುಸೂಯ (28)ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ಬೆಂಗಳೂರಿನ ಪ್ರತ್ಯೇಕ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ವಿಚಾರವಾಗಿ ಹಾಗೂ ಪತಿಯ ಸಂಬಳದ ವಿಷಯದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಆಗಸ್ಟ್ 11ರಂದು ಮನೆಗೆ ಬಂದಾಗ ಮತ್ತೆ ಜಗಳ ವಿಕೋಪಕ್ಕೆ ತಿರುಗಿ, ಸಾಗರ್ ಪತ್ನಿಯನ್ನು ಕೊಲೆ ಮಾಡಿದ್ದ.
ಕೊಲೆ ಮಾಡಿದ ನಂತರ ಆರೋಪಿ ಮೂರು ದಿನಗಳ ಕಾಲ ಶವದ ಜೊತೆಯಲ್ಲೇ ಮನೆಯಲ್ಲಿದ್ದ. ಬಳಿಕ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ, ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್ನ ಖಾಲಿ ಸೈಟ್ನಲ್ಲಿ ಎಸೆದು ಬಂದಿದ್ದ. ಯಾರಿಗೂ ಅನುಮಾನ ಬಾರದಂತೆ ಪ್ರತಿದಿನ ಅದೇ ಜಾಗದ ಬಳಿ ಬಂದು ಶವ ಪತ್ತೆಯಾಗಿದೆಯೇ ಎಂದು ಗಮನಿಸಿ ಹೋಗುತ್ತಿದ್ದ. ಆದರೆ, ಜಿಬಿಎ ಖಾಲಿ ಸೈಟ್ಗಳನ್ನು ಸ್ವಚ್ಛಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ, ಸೈಟ್ ಮಾಲೀಕರು ಕಾರ್ಮಿಕರನ್ನು ಕಳುಹಿಸಿ ಕ್ಲೀನ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ, ನಾಯಿಗಳು ಎಳೆದೊಯ್ದಿದ್ದ ಶವ ಕಂಡುಬಂದಿದೆ. ಸದ್ಯ ಆರೋಪಿಯನ್ನು ಪಿಒಲೀಸರು ಬಂಧಿಸಿದ್ದಾರೆ.



