ಬಣ್ಣದ ಲೋಕಕ್ಕೆ ಸಿದ್ದರಾಮಯ್ಯ ಎಂಟ್ರಿ: ರೀಲ್ ಲೈಫ್‌ನಲ್ಲೂ ಮುಖ್ಯಮಂತ್ರಿ ಪಾತ್ರ

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾವೊಂದರಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ವಿಶೇಷವೆಂದರೆ, ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಅವರು ಸಿನಿಮಾದಲ್ಲೂ ಮುಖ್ಯಮಂತ್ರಿಯ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.
ನಟ ಹಾಗೂ ನಿರ್ಮಾಪಕ ರಾಜೇಶ್ ಗೌಡ ಅವರ ಆರ್.ಎ. ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರಕ್ಕೆ ‘ಮುಖ್ಯಮಂತ್ರಿ’ ಎಂಬ ಶೀರ್ಷಿಕೆ ಇಡುವ ಸಾಧ್ಯತೆ ಇದೆ. ನಿರ್ದೇಶಕರು ಹೇಳಿದ ಕಥೆಯನ್ನು ಕೇಳಿ ಮೆಚ್ಚಿಕೊಂಡಿರುವ ಸಿದ್ದರಾಮಯ್ಯ ಅವರು ಸಿನಿಮಾದಲ್ಲಿ ಪ್ರಮುಖವಾಗಿರುವ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ, ಚಿತ್ರಕಥೆ ಬರೆಯುವುದರಿಂದ ಹಿಡಿದು ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್, ಸೆನ್ಸಾರ್ ಪ್ರಕ್ರಿಯೆ ಹಾಗೂ ಚಿತ್ರಮಂದಿರದಲ್ಲಿ ಪ್ರದರ್ಶನದವರೆಗಿನ ಎಲ್ಲ ಹಂತಗಳನ್ನು ಕೇವಲ 48 ಗಂಟೆಗಳಲ್ಲಿ ಪೂರ್ಣಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಚಿತ್ರತಂಡ ರೂಪಿಸಿದೆ. ಈ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಸಿದ್ದರಾಮಯ್ಯ ಅವರಿಗೆ ಚಿತ್ರರಂಗದ ಅನುಭವ ಸಂಪೂರ್ಣ ಹೊಸದೇನಲ್ಲ. ವಿದ್ಯಾರ್ಥಿ ಜೀವನದಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು. 2017ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ ‘ಸಮ್ಮರ್ ಹಾಲಿಡೇಸ್’ ಮಕ್ಕಳ ಚಿತ್ರದಲ್ಲಿ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಸಿದ್ದರಾಮಯ್ಯ ಅವರ ಜೀವನಗಾಥೆಯನ್ನಾಧರಿಸಿದ ‘ಲೀಡರ್ ರಾಮಯ್ಯ’ ಎಂಬ ಬಯೋಪಿಕ್ ಚಿತ್ರದ ಕೆಲಸಗಳೂ ಪ್ರತ್ಯೇಕವಾಗಿ ನಡೆಯುತ್ತಿವೆ ಎನ್ನಲಾಗಿದ್ದು, ಇದರಲ್ಲಿ ತಮಿಳು ಚಿತ್ರರಂಗದ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಅವರ ಆಪ್ತ ಎಚ್.ಎಂ. ರೇವಣ್ಣ ಮಾತನಾಡಿದ್ದು, ಆರಂಭದಲ್ಲಿ ಸಿನಿಮಾದಲ್ಲಿ ನಟಿಸಲು ಸಿದ್ದರಾಮಯ್ಯ ಅವರು ಹಿಂದೇಟು ಹಾಕಿದ್ದರು. ಬಳಿಕ ಮನವೊಲಿಸಿ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 48 ಗಂಟೆಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸುವ ಯೋಜನೆ ಇದ್ದು, ಚಿತ್ರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನಟಿ, ಮಾಜಿ ಸಚಿವೆ ಉಮಾಶ್ರೀ ಕೂಡ ನಟಿಸುವ ಸಾಧ್ಯತೆ ಇದೆ ಎಂಬ ಸುಳಿವನ್ನೂ ನೀಡಿದ್ದಾರೆ.
ರಾಜೇಶ್ ಗೌಡ ಅವರು ಸಿದ್ದರಾಮಯ್ಯ ಮಾತ್ರವಲ್ಲದೆ ರಾಜ್ಯದ ಪ್ರಮುಖ ರಾಜಕೀಯ ನಾಯಕರನ್ನೂ ಒಂದೇ ಸಿನಿಮಾದಲ್ಲಿ ಒಗ್ಗೂಡಿಸುವ ಯೋಜನೆ ರೂಪಿಸಿದ್ದಾರೆ. ಈ ಮೂಲಕ 48 ಗಂಟೆಗಳಲ್ಲಿ ಸಿನಿಮಾ ನಿರ್ಮಾಣದ ಪ್ರಯತ್ನ ಹಾಗೂ ರಾಜಕೀಯ ಹಿನ್ನೆಲೆಯ ಪ್ರಮುಖರ ಪಾತ್ರಗಳು ಚಿತ್ರದ ಕುತೂಹಲ ಹೆಚ್ಚಿಸಿವೆ.




