*CEIR ಪೋರ್ಟಲ್ ಬಳಸಿ 123 ಕಳುವಾದ ಮೊಬೈಲ್ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿರುವ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳನ್ನು ದಾಖಲಿಸಿದ್ದರು. ಈ ದೂರುಗಳ ಆಧಾರದ ಮೇಲೆ ಪೊಲೀಸರು ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಪೋರ್ಟಲ್ ಬಳಸಿ ಕಾರ್ಯಾಚರಣೆ ನಡೆಸಿದರು.
2026ರ ಜನವರಿ 1ರಿಂದ ಆಗಸ್ಟ್ 22ರವರೆಗೆ CEIR ಪೋರ್ಟಲ್ ಮೂಲಕ ವಿವಿಧ ಕಂಪನಿಗಳ ಒಟ್ಟು 123 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ಈಗಾಗಲೇ 79 ಮೊಬೈಲ್‌ಗಳನ್ನು ದೂರುದಾರರಿಗೆ ಹಿಂತಿರುಗಿಸಲಾಗಿದೆ. ಉಳಿದ 44 ಮೊಬೈಲ್‌ಗಳನ್ನು ಪತ್ತೆಹಚ್ಚಿ, ಆಗಸ್ಟ್ 22ರಂದು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಮೊಬೈಲ್‌ಗಳ ಪತ್ತೆ ಕಾರ್ಯವನ್ನು ಮಾರ್ಕೆಟ್ ಪೊಲೀಸ್ ಠಾಣೆಯ ಪಿಐ ಜೆ.ಎಂ. ಕಾಲಿವರ್ಮ ಹಾಗೂ ಸಿಬ್ಬಂದಿಗಳಾದ ಯಲ್ಲಪ್ಪ ಕಾಕನೂರು ಮತ್ತು ವಿನಾಯಕ್ ಯಲಿಗಾರ ಅವರು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಇವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.
ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ CEIR ಪೋರ್ಟಲ್ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದ್ದು, ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ಸಂದರ್ಭದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.




