*ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ತರಬೇತಿ ವಿಮಾನ ಅಪಘಾತಕ್ಕಿಡಾಗಿ ಪತನಗೊಂಡಿದ್ದು, ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ದುರಂತ ಸಂಭವಿಸಿದೆ. ಗಂಗಾ ನದಿ ಬಳಿಯ ನತ್ತುಪುರವಾ ಗ್ರಾಮದ ಸಮೀಪದ ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಡಬಲ್ ಎಂಜಿನ್ ವಿಮಾನ ಪತನಗೊಂಡಿದೆ. ಮೃತರನ್ನು ಗುಜರಾತ್ ಮೂಲದ ಬೋಧಕ ಪೈಲಟ್ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ.
ಪೊಲೀಸ್ ಆಯುಕ್ತ ರಘುಬೀರ್ ಲಾಲ್ ನೀಡಿರುವ ಮಾಹಿತಿ ಪ್ರಕಾರ, ವಿಮಾನವು ಬೆಳಗ್ಗೆ ಸುಮಾರು 11.30ಕ್ಕೆ ತರಬೇತಿ ಕೇಂದ್ರದಿಂದ ಹಾರಾಟ ಆರಂಭಿಸಿತ್ತು. ತರಬೇತಿ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಸುಮಾರು 20 ನಿಮಿಷಗಳ ಬಳಿಕ ವಿಮಾನ ಪತನಗೊಂಡಿದೆ.
ಪತನಗೊಂಡ ಅವಳಿ ಎಂಜಿನ್‌ನ ಟೆಕ್ನಮ್ ವಿಮಾನವನ್ನು 2023ರಲ್ಲಿ ತರಬೇತಿ ಉದ್ದೇಶಕ್ಕಾಗಿ ಫ್ಲೈಟ್ ಟ್ರೈನಿಂಗ್ ಶಾಲೆಗೆ ತರಲಾಗಿತ್ತು. ಬೋಧಕ ಪೈಲಟ್ ಸಚಿನ್ ಭಾಟಿಯಾ ಅವರಿಗೆ ಸುಮಾರು 3,000 ಗಂಟೆಗಳ ಹಾರಾಟದ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನವು ಪ್ರದೇಶದ ಹೊಲವೊಂದಕ್ಕೆ ಅಪ್ಪಳಿಸಿದ್ದು, ಅದರ ಅವಶೇಷಗಳು ಸುತ್ತಮುತ್ತ ಚದುರಿಕೊಂಡಿವೆ. ವಿಮಾನ ಪತನದ ವೇಳೆ ದೊಡ್ಡ ಶಬ್ದ ಕೇಳಿಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.




