*ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೊಸೈಟಿಯಿಂದ ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ವಿತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೊಸೈಟಿಯು 2025-26ನೇ ಆರ್ಥಿಕ ವರ್ಷದಲ್ಲಿ ₹27.37 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಿದೆ. ಅಕ್ಟೋಬರ್ 29, 2026ರಿಂದ ಸದಸ್ಯರ ಉಳಿತಾಯ ಖಾತೆಗಳಿಗೆ ಲಾಭಾಂಶದ ಮೊತ್ತ ಜಮೆ ಮಾಡಲಾಗುವುದು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಸೊಸೈಟಿಯ ಆಮಂತ್ರಿತ ನಿರ್ದೇಶಕ ಅಮಿತ್ ಪ್ರಭಾಕರ ಕೋರೆ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿರುವ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರ ಸಹಕಾರ, ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದ ಸಂಸ್ಥೆ ನಿರಂತರ ಪ್ರಗತಿ ಸಾಧಿಸುತ್ತಿದೆ ಎಂದರು.
ಕೆಎಲ್‌ಇ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಸೊಸೈಟಿಯ ಸಂಸ್ಥಾಪಕ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ಸಾರಥ್ಯದಲ್ಲಿ ಮತ್ತು ಅಮಿತ್ ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ. 2025-26ನೇ ಸಾಲಿನ ಲಾಭಾಂಶವನ್ನು ಅಕ್ಟೋಬರ್ 29ರಿಂದ ಸದಸ್ಯರ ಉಳಿತಾಯ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು. ಸದಸ್ಯರು ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ಶಾಖೆಗಳನ್ನು ಸಂಪರ್ಕಿಸಬಹುದು. ಇದೇ ವೇಳೆ ಸಂಸ್ಥೆಯ ಸಿಬ್ಬಂದಿಗೆ ಶೇ.20ರಷ್ಟು ದೀಪಾವಳಿ ಬೋನಸ್ ನೀಡಲಾಗಿದೆ ಎಂದು ತಿಳಿಸಿದರು.
61 ಶಾಖೆಗಳಿಂದ ₹1,638 ಕೋಟಿಗೂ ಅಧಿಕ ಠೇವಣಿ
ಮಾರ್ಚ್ 31, 2026ರ ಅಂತ್ಯಕ್ಕೆ ಸೊಸೈಟಿಯು 1,11,331 ಸದಸ್ಯರನ್ನು ಹೊಂದಿದ್ದು, ₹4.64 ಕೋಟಿ ಷೇರು ಬಂಡವಾಳ ಹಾಗೂ ₹167.02 ಕೋಟಿ ಕಾಯ್ದಿಟ್ಟ ಮತ್ತು ಇತರ ನಿಧಿಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ₹1,638 ಕೋಟಿಗೂ ಅಧಿಕ ಠೇವಣಿ ಸಂಗ್ರಹವಾಗಿದ್ದು, ಸದಸ್ಯರಿಗೆ ₹1,202 ಕೋಟಿಗೂ ಅಧಿಕ ಸಾಲ ವಿತರಿಸಲಾಗಿದೆ. ವಾರ್ಷಿಕ ವಹಿವಾಟು ₹23,248 ಕೋಟಿ ಮೀರಿದ್ದು, ₹27.37 ಕೋಟಿ ನಿವ್ವಳ ಲಾಭ ಗಳಿಸಿದೆ. ಪ್ರಸ್ತುತ ಸಂಸ್ಥೆಯು ಒಟ್ಟು 61 ಶಾಖೆಗಳ ಮೂಲಕ ಸೇವೆ ಸಲ್ಲಿಸುತ್ತಿದೆ ಎಂದರು.
ಸೊಸೈಟಿಯ ವಿಸ್ತರಣೆಯ ಭಾಗವಾಗಿ ಕರ್ನಾಟಕದ ದಾಂಡೇಲಿ, ಗೋಕರ್ಣ, ಚಿತ್ರದುರ್ಗ, ತುಮಕೂರು, ಮೈಸೂರು, ಮುನ್ನೋಳಿ, ಯರಗಟ್ಟಿ ಮತ್ತು ಬೆಳವಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಾಗೂ ಮಹಾರಾಷ್ಟ್ರದ ಕಾಗಲ್, ಆಕಿವಾಟ, ಜೈಸಿಂಗಪುರ, ಬಿಳ್ಳೂರು, ನವಿ ಮುಂಬೈ, ಪುಣೆ, ಸೊಲ್ಲಾಪುರ ಮತ್ತು ದತ್ತವಾಡ ಸೇರಿದಂತೆ ಒಟ್ಟು 17 ಹೊಸ ಶಾಖೆಗಳನ್ನು ಶೀಘ್ರದಲ್ಲೇ ಆರಂಭಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಸದಸ್ಯರಿಗೆ ಹಲವು ಸೌಲಭ್ಯಗಳು
ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಮಾನವಾಗಿ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಸೊಸೈಟಿ, ಆಕರ್ಷಕ ಠೇವಣಿ ಯೋಜನೆಗಳು ಹಾಗೂ ತ್ವರಿತ ಸಾಲ ಸೌಲಭ್ಯಗಳನ್ನು ಕಲ್ಪಿಸಿದೆ. ಸದಸ್ಯರು ಅಪಘಾತದಿಂದ ಮೃತಪಟ್ಟರೆ ₹1 ಲಕ್ಷ ಹಾಗೂ ಅಂಗವೈಕಲ್ಯ ಉಂಟಾದರೆ ₹50 ಸಾವಿರದವರೆಗೆ ನೆರವು ನೀಡುವ ಸೌಲಭ್ಯವಿದೆ. ಯಶಸ್ವಿನಿ ಯೋಜನೆಯೊಂದಿಗೆ ಆರೋಗ್ಯ ವಿಮೆ, ಸಾಮಾನ್ಯ ವಿಮೆ, ಜೀವ ವಿಮೆ ಮತ್ತು ವಿ-ಕೇರ್ ಆರೋಗ್ಯ ವಿಮೆಯಂತಹ ಸೌಲಭ್ಯಗಳನ್ನು ಕಡಿಮೆ ದರದಲ್ಲಿ ಒದಗಿಸಲಾಗುತ್ತಿದೆ.
ಒಂದೇ ಸೂರಿನಡಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡಿರುವ ಸಂಸ್ಥೆಯು ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಪ್ಯಾನ್ ಕಾರ್ಡ್ ಸೇವೆ ಹಾಗೂ ವಿಮಾನ, ರೈಲು ಮತ್ತು ಬಸ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯಗಳನ್ನು ನೀಡುತ್ತಿದೆ. ನದಿಯಿಂದ ಏತ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಚಿನ್ನಾಭರಣಗಳ ಮೇಲೆಯೂ ಮಾಸಿಕ ಮತ್ತು ತ್ರೈಮಾಸಿಕ ಬಡ್ಡಿ ಆಯ್ಕೆಗಳೊಂದಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
389 ಸಿಬ್ಬಂದಿಗೆ ಉದ್ಯೋಗಾವಕಾಶ
ಸೊಸೈಟಿಯಲ್ಲಿ 68 ಮಹಿಳೆಯರು ಸೇರಿದಂತೆ ಒಟ್ಟು 389 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಸಂಸ್ಥೆ ಹಲವು ಸೌಲಭ್ಯಗಳನ್ನು ಜಾರಿಗೊಳಿಸಿದೆ. ಸಿಬ್ಬಂದಿಗೆ ₹3 ಲಕ್ಷದವರೆಗಿನ ಆರೋಗ್ಯ ವಿಮೆ, ವಾರ್ಷಿಕ ವೇತನದ ಐದು ಪಟ್ಟು ಮೊತ್ತದ ಸಾಮಾನ್ಯ ವಿಮೆ, ಗ್ರಾಚುಟಿ, ಭವಿಷ್ಯ ನಿಧಿ, ಪಿಂಚಣಿ ಸೌಲಭ್ಯ ಹಾಗೂ ಶೇ.20ರಷ್ಟು ಬೋನಸ್ ಮತ್ತು ಎಕ್ಸ್‌ಗ್ರೇಷಿಯಾ ನೀಡಲಾಗುತ್ತಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಏಳು ಸಿಬ್ಬಂದಿ ಆರೋಗ್ಯ ವಿಮೆಯಡಿ ಒಟ್ಟು ₹4.5 ಲಕ್ಷದವರೆಗೆ ಪ್ರಯೋಜನ ಪಡೆದಿದ್ದಾರೆ. ಉದ್ಯೋಗದಾತರ ಮೂಲಕ ರಾಜ್ಯ ನೌಕರರ ವಿಮಾ ನಿಗಮದ ಸೌಲಭ್ಯವನ್ನು 175 ಸಿಬ್ಬಂದಿ ಹಾಗೂ ಅವರ ಕುಟುಂಬದವರು ಪಡೆಯುತ್ತಿದ್ದಾರೆ. ಸಂಸ್ಥೆಯ ಸ್ವಂತ ಟ್ರಸ್ಟ್ ಮೂಲಕ ಖಾಸಗಿ ಪಿಂಚಣಿ ಯೋಜನೆಯನ್ನೂ ಆರಂಭಿಸಲಾಗಿದ್ದು, ಈಗಾಗಲೇ ಇಬ್ಬರು ಸಿಬ್ಬಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಅಮಿತ್ ಕೋರೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಅಧ್ಯಕ್ಷ ಮಹಾಂತೇಶ ಪಾಟೀಲ, ನಿರ್ದೇಶಕಿ ಡಾ. ಪ್ರೀತಿ ದೊಡ್ಡವಾಡ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ಸಿದ್ದಗೌಡ ಮಗದುಮ್ಮ, ನಿರ್ದೇಶಕರಾದ ಅಣ್ಣಾಸಾಬ ಸಂಕೇಶ್ವರಿ, ಪಿಂಟು ಹಿರೇಕುರಬರ, ಬಸನಗೌಡ ಅಸಂಗಿ, ಡಾ. ಸುಕುಮಾರ ಚೌಗಲೆ, ಅಮಿತ್ ಜಾಧವ, ಪ್ರಫುಲ್ ಶೆಟ್ಟಿ, ಅಶೋಕ ಚೌಗಲಾ, ಅನಿಲ್ ಪಾಟೀಲ, ವಿವೇಕಾನಂದ ಕಮತೆ, ಶ್ರೀಕಾಂತ ಉಮರಾಣಿ, ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಕರೋಶಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



