*ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸುವಂತೆ ಟವರ್ ಏರಿ ಕುಳಿತ ಯುವಕ*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿದ ಯುವತಿ ಜೊತೆ ಮದುವೆ ಮಾಡಿಸಬೇಕೆಂದು ಹಠ ಹಿಡಿದ ಯುವಕನೊಬ್ಬ ಮೊಬೈಲ್ ಟವರ್ ಏರಿ ಕುಳಿತ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪಾಗಲ್ ಪ್ರೇಮಿ, ಮೊಬೈಲ್ ಟವರ್ ಏರಿ ಟವರ್ ನ ತುತ್ತತುದಿಯಲ್ಲಿ ಕುಳಿತು ಹುಚ್ಚಾಟವಾಡಿದ್ದಾನೆ. ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ. ಈತ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಈತನನ್ನು ಇಷ್ಟಡುತ್ತಿರಲಿಲ್ಲ. ಒನ್ ಸೈಡ್ ಲವ್ ನಿಂದಾಗಿ ಯುವಕ ತನಗೆ ಯುವತಿಯೊಂದಿಗೆ ಮದುವೆ ಮಾಡಿಸುವಂತೆ ಒತ್ತಾಯಿಸಿದ್ದಾನೆ.
ಯುವಕ ಎಪಿಎಂಸಿ ಗಂಜ್ ಪ್ರದೇಶದಲ್ಲಿರುವ ರಿಲಾಯನ್ಸ್ ಮಾರ್ಟ್ ಸಮೀಪದಲ್ಲಿನ ಮೊಬೈಲ್ ಟವರ್ ಏರಿದ್ದಾನೆ. ಇದನ್ನು ಸ್ಥಳೀಯ ಕೆಲವರು ಗಮನಿಸಿದ್ದರು. ಮೊದಲಿಗೆ ಮೊಬೈಲ್ ಕಂಪನಿಯವರು ಇರಬೇಕು, ಟವರ್ ರಿಪೇರಿಗೆ ಏರುತ್ತಿದ್ದಾನೆ ಎಂದು ಸುಮ್ಮನಾಗಿದ್ದರು. ಬಳಿಕ ಯುವಕ ಟವರ್ ತುದಿಯಿಂದ ಕೂಗಲು ಶುರು ಮಾಡಿದ್ದ. ‘ನಾನು ಹುಡುಗಿಯನ್ನು ಪ್ರೀತಿಸಿದ್ದು, ಆಕೆಯ ಜೊತೆಗೆ ಮದುವೆ ಮಾಡಬೇಕು. ಇಲ್ಲವಾದಲ್ಲಿ ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಂದು ಆತನ ಮನವೊಲಿಸುವಲ್ಲಿ ಯತ್ನಿಸಿದ್ದರು. ಆದರೆ ಟವರ್ ಇಳಿಯಲು ಒಪ್ಪದ ಯುವಕ, ಟವರ್ ಮೇಲೆಯೇ ಕೆಲಕಾಲ ಮಲಗಿದ್ದ. ಈ ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಆತನನ್ನು ಕೆಳಗೆ ಇಳಿಸಿದ್ದಾರೆ.
ಗ್ರಾಮಸ್ಥರು ಹೇಳುವ ಪ್ರಕಾರ ಈ ಯುವಕ ಭಾನುವಾರ ಕೂಡ ಇದೇ ರೀತಿ ರಾಯಚೂರಿನಲ್ಲಿ ಟವರ್ ಏರಿ ಕುಳಿತಿದ್ದ. ಅಪರಿಚಿತ ಯುವತಿಯನ್ನು ಆತ ಪ್ರೀತಿಸುತ್ತಿದ್ದು, ಆ ಹುಡುಗಿ ಯಾರೆಂಬುದೂ ಗೊತ್ತಿಲ್ಲ. ಪದೇ ಪದೇ ಟವರ್ ಏರಿ ಕುಳಿತು ಹುಚ್ಚಾಟವಾಡುತ್ತಾನೆ ಎಂದಿದ್ದಾರೆ.



