Film & EntertainmentKannada NewsKarnataka NewsLatest

*ದರ್ಶನ್ ಹೆಸರು ದುರ್ಬಳಕೆ ಮಾಡಬೇಡಿ*: *ವಿಜಯಲಕ್ಷ್ಮಿ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಹೆಸರಿನಲ್ಲಿ ವಿವಾದ ಸೃಷ್ಟಿಸುವವರಿಗೆ ಮತ್ತು ಸ್ವಹಿತಾಸಕ್ತಿಗಾಗಿ ಡಿ ಬಾಸ್ ಹೆಸರನ್ನು ಬಳಸಿಕೊಳ್ಳುವವರಿಗೆ ಪತ್ನಿ ವಿಜಯಲಕ್ಷ್ಮಿ ನೇರ ಸಂದೇಶ ರವಾನಿಸಿದ್ದಾರೆ. ದರ್ಶನ್ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡು, ಅಭಿಮಾನಿಗಳು ಮತ್ತು ಸಾರ್ವಜನಿಕರು ಹೆಸರನ್ನು ಗೌರವದಿಂದ ಬಳಸಬೇಕು ಎಂದು ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಚಾಮರಾಜನಗರದ ಕಾರ್ಯಕ್ರಮದಲ್ಲಿ ನಟ ಧನ್ವೀರ್ ಗೌಡ ದರ್ಶನ್ ಪರವಾಗಿ ಮಾತನಾಡಿದ್ದು, ವೇದಿಕೆಯಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.

ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದರ್ಶನ್ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡು, “ನಿಮ್ಮ ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ” ಎಂದು ಬರೆದಿದ್ದಾರೆ. ಇದೇ ವೇಳೆ ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳನ್ನು ಕೋರಿದ್ದಾರೆ.

ದರ್ಶನ್ ಹೆಸರನ್ನು ಬಳಸಿಕೊಂಡು ಅನಗತ್ಯ ವಿವಾದಗಳನ್ನು ಸೃಷ್ಟಿಸುವುದು ಅಥವಾ ವೈಯಕ್ತಿಕ ಲಾಭಕ್ಕಾಗಿ ಹೆಸರನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂಬ ಸಂದೇಶ ವಿಜಯಲಕ್ಷ್ಮಿ ಪೋಸ್ಟ್‌ನಲ್ಲಿದೆ. ದರ್ಶನ್ ಪರವಾಗಿ ಮಾತನಾಡುವವರು ಹಾಗೂ ಟೀಕೆ ಮಾಡುವವರು ಕೂಡ ಗೌರವ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಇನ್ನು, ಚಾಮರಾಜನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದರ್ಶನ್ ಅಭಿಮಾನಿಗಳು ಜೋರಾಗಿ ‘ಡಿ ಬಾಸ್’ ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ನಟ ಧನ್ವೀರ್ ಗೌಡ ದರ್ಶನ್‌ಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ. “ಎಷ್ಟೇ ಕೂಗಿರಿ, ಏನೇ ಮಾಡ್ರಿ, ದರ್ಶನ್‌ಗೆ ಏನೂ ಮಾಡಕ್ಕಾಗಲ್ಲ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಏನೂ ಮಾಡಕ್ಕಾಗಲ್ಲ. ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರೆ” ಎಂದು ಹೇಳಿದ್ದಾರೆ.

ಧನ್ವೀರ್ ಮಾತುಗಳಿಗೆ ದರ್ಶನ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಧನ್ವೀರ್ ದರ್ಶನ್ ಪರವಾಗಿ ನಿಂತಿರುವುದನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಸಾರ್ವಜನಿಕ ವೇದಿಕೆಯಲ್ಲಿ ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದೆಡೆ ವಿಜಯಲಕ್ಷ್ಮಿ ದರ್ಶನ್ ಹೆಸರನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳದಂತೆ ಮನವಿ ಮಾಡಿದ್ದರೆ, ಮತ್ತೊಂದೆಡೆ ಧನ್ವೀರ್ ಬಹಿರಂಗವಾಗಿ ದರ್ಶನ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ಎರಡು ಬೆಳವಣಿಗೆಗಳೂ ದರ್ಶನ್ ಅಭಿಮಾನಿಗಳ ವಲಯದಲ್ಲಿ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮುಂದುವರಿದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button