Karnataka NewsLatestPolitics

*ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷ ನಾಯಕರಿಗೆ ಖಡಕ್ ತಿರುಗೇಟು ನೀಡಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ವಿಪಕ್ಷಗಳು ಏನು ಬೇಕಾದರೂ ಹೇಳಲಿ‌. ನಮ್ಮ ಗುಪ್ತನಿಧಿಯಲ್ಲಿ ಇನ್ನೂ ಏನೇನಿದೆ ಎಂದು ಅವರಿಗೆ ಗೊತ್ತಿಲ್ಲ. ವಿರೋಧ ಪಕ್ಷಗಳು ಕನಸು ಕಾಣಲಿ, ಹಗಲುಗನಸು ಬೇಡ. ಕನಸು ಕಾಣುವುದು ತಪ್ಪಲ್ಲ” ಸಿಎಂ ಡಿ ಕೆ ಶಿವಕುಮಾರ್ ಅವರು ಲೇವಡಿ ಮಾಡಿದರು.

ಅರಮನೆ ಮೈದಾನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.

Home add -Advt

ಪ್ರಿಯಾಂಕ್ ಖರ್ಗೆ ಅವರ ರಾಜಿನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿರಿರುವ ಬಗ್ಗೆ ಕೇಳಿದಾಗ, “ಅವರುಗಳು ಯಾವುದೇ ಬಾಂಬ್ ಬೇಕಾದರೂ ಸಿಡಿಸಲಿ. ನಾನು ಆತುರದಲ್ಲಿಲ್ಲ. ನಾನು ವೈಯಕ್ತಿಕ ವಿಚಾರಗಳಿಗೆ ಹೋಗುವುದಿಲ್ಲ. ಕೆಪಿಎಸ್ ಸಿಗೆ ಅಧ್ಯಕ್ಷರನ್ನು ನೇಮಕ ಮಾಡಿದವರು ಯಾರು? ಯಾರು ಸೇರಿಕೊಂಡಿದ್ದಾರೆ? ಯಾರು ಹೊಣೆ, ಯಾರು ಭಾಗಿಯಾಗಿದ್ದಾರೆ? ಜಮೀನು ಖರೀದಿ ಸೇರಿದಂತೆ ಹಲವು ಆರೋಪಗಳ ಬಗ್ಗೆ ಈಗಲೇ ಯಾವುದೇ ಹೇಳಿಕೆ ನೀಡುವುದಿಲ್ಲ” ಎಂದರು.

“ತನಿಖೆ ನಡೆಯುತ್ತಿದ್ದು, ತನಿಖೆಯ ವರದಿ ಮೊದಲು ಬರಲಿ. ಬಳಿಕ ದಾಖಲೆ ಸಮೇತ ಯಾರು ಮಾತನಾಡಬೇಕೋ ಅವರು ಮಾತನಾಡುತ್ತಾರೆ. ಅವರುಗಳ ನಡೆಯನ್ನು ‘ಹಿಟ್ ವಿಕೆಟ್’ ಎಂದು ಕರೆಯುತ್ತಾರೆ. ರಾಜ್ಯದ ಅಭಿವೃದ್ಧಿ, ರೈತರ ಸಮಸ್ಯೆ, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಚರ್ಚೆಯಾಗಬೇಕು. ರಾಜ್ಯದ ಅಭಿವೃದ್ಧಿಯೇ ನನ್ನ ಆದ್ಯತೆ” ಎಂದು ಹೇಳಿದರು.

ದೆಹಲಿ ಭೇಟಿ ವೇಳೆ ಸಂಪುಟ ವಿಸ್ತರಣೆ ಚರ್ಚೆ ಮಾಡುವಿರಾ ಎಂದಾಗ, “ಈ ವಿಚಾರ ಚರ್ಚೆಯಲ್ಲಿಯೇ ಇಲ್ಲ. ಅದು ಆಗಬೇಕಾದ ಕಾಲಕ್ಕೆ ಆಗುತ್ತದೆ” ಎಂದರು

ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಬದ್ಧ

ಹಿಂದುಳಿದ ಜಾತಿಗಳ ಸಮಾವೇಶ ಹಾಗೂ ಮಧುಸೂಧನ್ ನಾಯ್ಕ್ ವರದಿ ಜಾರಿಗೆ ಒತ್ತಾಯಿಸುತ್ತಿರುವ ಬಗ್ಗೆ ಕೇಳಿದಾಗ, “ಅಹಿಂದ ನಮ್ಮದು. ಕಾಂಗ್ರೆಸ್ ಸಿದ್ದಾಂತ ಅಹಿಂದ ಸಿದ್ದಾಂತ. ಹಿಂದುಳಿದ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್ ತನ್ನ ಸಿದ್ಧಾಂತದಂತೆ ಮುಂದುವರಿಯಲಿದೆ. ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಹರಿಪ್ರಸಾದ್ ಅವರು ಹಾಗೂ ಸಚಿವರು ಒಗ್ಗಟ್ಟಿನಿಂದ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

ಇಬ್ಬರು ವಿದೇಶಿ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ

ಅಕ್ಕ ಸಮ್ಮೇಳನಕ್ಕೆ ನೀಡಿದ ಸಂದೇಶದ ಬಗ್ಗೆ ಕೇಳಿದಾಗ, “ವಿದೇಶಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಂಘಟನೆಗಳನ್ನು ಬೆಳೆಸುತ್ತಿರುವ ಕನ್ನಡಿಗರನ್ನು ಗುರುತಿಸುವ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳಲ್ಲೂ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ.‌ ಅಮೆರಿಕ ಮಾತ್ರವಲ್ಲ, ವಿಶ್ವದಾದ್ಯಂತ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸಬೇಕು. ವಿದೇಶಗಳಲ್ಲಿ ಕನ್ನಡ ಸಂಘಟನೆಗಳನ್ನು ಕಟ್ಟಿಕೊಂಡು ಭಾಷೆ, ನಾಡು ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರುವವರು ನಮ್ಮ ಹೆಮ್ಮೆ. ಅಂತಹ ಎಲ್ಲ ಕನ್ನಡಿಗರಿಗೆ ಸರ್ಕಾರದ ಪರವಾಗಿ ಗೌರವ ಸಲ್ಲಿಸುತ್ತೇನೆ” ಎಂದು ಹೇಳಿದರು.

“ಯಾರಿಗೆ ಧ್ವನಿ ಇಲ್ಲ, ಯಾರು ನೊಂದಿದ್ದಾರೆ, ಯಾರಿಗೆ ನ್ಯಾಯ ಒದಗಿಸಬೇಕು ಎಂಬುದನ್ನು ಗುರುತಿಸಿ ಅವರ ಪರವಾಗಿ ನಿಲ್ಲುವುದು ಕಾಂಗ್ರೆಸ್ ಸಿದ್ಧಾಂತ. ಎಲ್ಲ ವರ್ಗದ ಜನರಿಗೆ ರಕ್ಷಣೆ ಮತ್ತು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದುವರಿಯಲಿದೆ” ಎಂದರು.

ವಿದ್ಯಾರ್ಥಿ ಹಿತಕ್ಕಾಗಿ ಶಿಕ್ಷಣ ವ್ಯವಸ್ಥೆ ಸುಧಾರಣೆ

“ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿ ರಚಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

“ಯುವಜನರ ಭವಿಷ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಂದೇಶ. ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಸುಧಾರಿಸಬೇಕು, ವಿದ್ಯಾರ್ಥಿಗಳಿಗೆ ಹೇಗೆ ನೆರವಾಗಬೇಕು ಎಂಬ ಕುರಿತು ಈಗಾಗಲೇ ಹಲವು ವಿಚಾರಗಳನ್ನು ಚರ್ಚಿಸಲಾಗಿದ್ದು, ಸಂಪುಟ ಉಪಸಮಿತಿ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿದೆ” ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ

“ಕರ್ನಾಟಕ ಪ್ರತಿಭೆಯ ತವರು ರಾಜ್ಯ. ದೇಶದ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ಹಲವು ದಶಕಗಳಿಂದ ಮುಂಚೂಣಿಯಲ್ಲಿದೆ. ಸುಪ್ರೀಂಕೋರ್ಟ್ ದೆಹಲಿಯಲ್ಲಿದೆ ಆದರೆ ರಾಷ್ಟ್ರೀಯ ಕಾನೂನು ಶಾಲೆ ನಮ್ಮಲ್ಲಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವುದು ರಾಜ್ಯದ ಶೈಕ್ಷಣಿಕ ಸಾಮರ್ಥ್ಯಕ್ಕೆ ಸಾಕ್ಷಿ” ಎಂದು ಹೇಳಿದರು.

“ಈ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕರ್ನಾಟಕದ ಮುನ್ನಡೆಯನ್ನು ಹೆಚ್ಚಿಸಬೇಕು. ಜಾಗತಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ನಮ್ಮ ಯುವಜನರನ್ನು ಸಜ್ಜುಗೊಳಿಸಬೇಕು. ರಾಜೀವ್ ಗಾಂಧಿ ಅವರು ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿಯ ಬದಲಾವಣೆ ತಂದರು. ಭಾರತ ಇಂದು ಅಂತರರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದೆ” ಎಂದು ಹೇಳಿದರು.

ನೀಟ್, ಕೆಪಿಎಸ್ ಸಿ ಪರೀಕ್ಷೆಗಳಲ್ಲಿ ಶಿಸ್ತು

“ನೀಟ್, ಕೆಪಿಎಸ್ ಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಪರೀಕ್ಷಾ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಶುದ್ಧವಾಗಿ ನಡೆಸಬೇಕು ಎಂಬ ಕುರಿತು ಈಗಾಗಲೇ ಚರ್ಚಿಸಿ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ” ಎಂದು ತಿಳಿಸಿದರು.

Related Articles

Back to top button