
ಪ್ರಗತಿವಾಹಿನಿ ಸುದ್ದಿ: ದೆಹಲಿಯ ಭಾರತ್ ಮಂಟಪದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು, ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆದವು.
ಭಾರತ್ ಮಂಟಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರು ತಮಿಳಿನ ಖ್ಯಾತ ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿಯ ರಷ್ಯನ್ ಅನುವಾದಿತ ಕೃತಿಯನ್ನು ವ್ಲಾಡಿಮಿರ್ ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು.
ತಿರುಕ್ಕುರಳ್ ಕೃತಿಯನ್ನು ನೀಡುತ್ತಾ, ಈ ಕೃತಿ ಭಾರತದ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದರು. ಪುಸ್ತಕದ ಬಗ್ಗೆ ಮಾಹಿತಿ ಪಡೆದುಕೊಂಡ ರಷ್ಯಾ ಅಧ್ಯಕ್ಷರು, ಈ ಅಮೂಲ್ಯ ಕೃತಿಯನ್ನು ಉಡುಗೊರೆಯಾಗಿ ನೀಡಿದ್ದಕ್ಕೆ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
ನಂತರ ಉಭಯ ನಾಯಕರು ದ್ವಿಪಕ್ಷೀಯ ರಾಜತಾಂತ್ರಿಕ, ವಾಣಿಜ್ಯ ಮತ್ತು ರಕ್ಷಣಾ ಸಂಬಂಧಿ ಮಾತುಕತೆಗಳನ್ನು ನಡೆಸಿದರು. ಹೂಡಿಕೆ ಮತ್ತು ಇಂಧನ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿಯೂ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಭಾರತ-ರಷ್ಯಾ ರಕ್ಷಣಾ ಸಹಕಾರ ಕಾರ್ಯಸೂಚಿ ಪ್ರಮುಖವಾಗಿ ಚರ್ಚೆಗೆ ಬಂದಿತು. ನಿರೀಕ್ಷಿತ ರಕ್ಷಣಾ ಯೋಜನೆಗಳ ಬಗ್ಗೆ ಉಭಯ ನಾಯಕರು ಸುದೀರ್ಘ 45 ನಿಮಿಷಗಳ ಕಾಲ ಚರ್ಚೆ ನಡೆಸಿದರು.
2030ರ ವೇಳೆಗೆ 100 ಶತಕೋಟಿ ಡಾಲರ್ ಮೊತ್ತದ ದ್ವಿಪಕ್ಷೀಯ ವ್ಯಾಪಾರದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಕುರಿತು, ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಅವರು ಮಾತುಕತೆ ನಡೆಸಿದರು. ಭಾರತದಲ್ಲಿ ‘ಇನ್ನೋಪ್ರಾಮ್’ ಮೂಲಕ ರೈಲ್ವೆ, ಸುರಂಗ ನಿರ್ಮಾಣ ಮತ್ತು ಉಕ್ಕು ಮೌಲ್ಯ ಸರಪಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತೂ, ಉಭಯ ನಾಯಕರು ಸುದೀರ್ಘವಾಗಿ ಚರ್ಚಿಸಿದರ ಎಂದು ತಿಳಿದುಬಂದಿದೆ.


