*ಬೆಂಕಿ ದುರಂತದಲ್ಲಿ 6 ಜನ ಸಾವು: ಸಾಂತ್ವನ ಹೇಳಿದ ವಿಜಯೇಂದ್ರ, ಆರ್ ಅಶೋಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಚವ್ಹಾಟ ಗಲ್ಲಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ ಆರು ಜನರು ಮೃತಪಟ್ಟಿರುವ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ ಭೇಟಿ ನೀಡಿದರು. ಬಿಜೆಪಿ ಪಕ್ಷದ ವತಿಯಿಂದ 1 ಲಕ್ಷ ರೂ. ಪರಿಹಾರವನ್ನೂ ನೀಡಿ, ದುರಂತ ಅಂತ್ಯ ಕಂಡ ಧಮೋನೆ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಉಭಯ ನಾಯಕರು ಮೃತ ಗಜಾನನ ಧಮೋನೆ ಅವರ ಕುಟುಂಬಸ್ಥರನ್ನು ಮಾತನಾಡಿಸಿ, ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಈ ವೇಳೆ ಧಮೋನೆ ಕುಟುಂಬಸ್ಥರು ಸರ್ಕಾರದಿಂದ ಈವರೆಗೂ ಪರಿಹಾರ ಬಂದಿಲ್ಲ ಎಂದು ನಾಯಕರ ಮುಂದೆ ಅಳಲು ತೋಡಿಕೊಂಡರು. ತಕ್ಷಣ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಆರ್.ಅಶೋಕ ಅವರು ಕರೆ ಮಾಡಿದರು. ಆಗ ಜಿಲ್ಲಾಡಳಿತದಿಂದ ಪರಿಹಾರ ಕೊಡಲು ಅವಕಾಶ ಇಲ್ಲ ಎಂದರು. ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲಾಗುವುದು. ಈ ಸಂಬಂಧ ನಾನೇ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆಯುವುದಾಗಿ ಆರ್.ಅಶೋಕ ತಿಳಿಸಿದರು.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ, ಬಿ.ವೈ.ವಿಜಯೇಂದ್ರ, ರೆಫ್ರಿಜರೇಟರ್ ಶಾರ್ಟ್ ಸರ್ಕ್ಯೂಟ್ ಆಗಿ ಗಜಾನನ ಧಮೋನೆ ಅವರ ಇಡೀ ಮನೆ ಸುಟ್ಟು ಭಸ್ಮವಾಗಿದೆ. ಕುಟುಂಬದ ಆರು ಜನರು ದುರಂತದಲ್ಲಿ ಮೃತಪಟ್ಟಿರುವುದು ಹೃದಯವಿದ್ರಾವಕ ಘಟನೆ. ದುರಂತ ಸಂಭವಿಸಿದ ದಿನ ಅವರ ಇನ್ನೋರ್ವ ಮಗಳು ಮತ್ತು ಅಳಿಯ ಇದೇ ಮನೆಯಲ್ಲಿ ಊಟ ಮಾಡಿ, ರಾತ್ರಿ ತಮ್ಮ ಊರಿಗೆ ವಾಪಸ್ಸು ಹೋಗಿದ್ದರು. ಒಂದು ವೇಳೆ ಅವರು ಇಲ್ಲಿಯೇ ಇದ್ದಿದ್ದರೆ ಪಾಪ ಅವರಿಗೂ ಅನ್ಯಾಯ ಆಗುತ್ತಿತ್ತು. ಬಡ ಕುಟುಂಬಕ್ಕೆ ಬಹಳ ದೊಡ್ಡ ಅನ್ಯಾಯ ಆಗಿದೆ. ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದಾರೆ. ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ನಾವು ಮಾಡುತ್ತೇವೆ ಎಂದರು.
ಈಗಾಗಲೇ ಬಿಜೆಪಿ ಪಕ್ಷದ ವತಿಯಿಂದ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಮಾನವೀಯ ದೃಷ್ಟಿಯಿಂದ, ಇದರಲ್ಲಿ ಕಾನೂನು ಮತ್ತೊಂದು ಅಡಚಣೆ ಬರಬಾರದು. ಒಂದೇ ಕುಟುಂಬದ ಆರು ಮಂದಿ ಸುಟ್ಟು ಭಸ್ಮ ಆಗಿರುವ ಸಂದರ್ಭದಲ್ಲಿ, ಆ ಕುಟುಂಬಕ್ಕೆ ನ್ಯಾಯ ಕೊಡಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾನು ಮತ್ತು ವಿರೋಧ ಪಕ್ಷದ ನಾಯಕರು ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮೇಲೆ ಒತ್ತಾಯ ಮಾಡಿ, ಅತೀ ಶೀಘ್ರದಲ್ಲಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ನಾನು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದಾಗ, ಅವರು ಆಚೆ ಕಡೆ ಏನಾದರೂ ವಿದ್ಯುತ್ ತಗುಲಿ ದುರಂತ ಸಂಭವಿಸಿದ್ದರೆ ಪರಿಹಾರ ನೀಡುತ್ತಿದ್ದೇವು. ಪ್ರಿಡ್ಜ್ ಒಡೆದು ಹೋಗಿ ಈ ರೀತಿ ಅವಘಡ ಸಂಭವಿಸಿದೆ. ಪರಿಹಾರ ಕೊಡಲು ನಮ್ಮಲ್ಲಿ ನಿಯಮಗಳು ಇಲ್ಲ. ಹಾಗಾಗಿ, ಅದಕ್ಕೆ ಒಂದು ಪತ್ರ ಕೇಳಿದ್ದಾರೆ, ಆ ಪತ್ರವನ್ನು ಸರ್ಕಾರಕ್ಕೆ ಕಳಿಸಲಾಗುವುದು. ವಿಶೇಷ ಪ್ರಕರಣ ಅಂತಾ ಪರಿಗಣಿಸಿ, ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಅಂತಾ ನಾವು ಕೂಡ ಸರ್ಕಾರ ಮೇಲೆ ಒತ್ತಡ ಹೇರುತ್ತೇವೆ ಎಂದರು.
ಸಿದ್ಧಾರ್ಥ್ ಟ್ರಸ್ಟ್ ನಲ್ಲಿ ಅವ್ಯವಹಾರ ಜಗಜಾಹೀರು ಆಗಿದೆ: ಆರ್ ಅಶೋಕ
ಖರ್ಗೆ ಒಡೆತನದ ಸಿದ್ಧಾರ್ಥ್ ಟ್ರಸ್ಟ್ ಕೇಸ್ ರಿ ಓಪನ್ ವಿಚಾರಕ್ಕೆ ವಿಪಕ್ಷ ನಾಯಕ್ ಆರ್.ಅಶೋಕ ಪ್ರತಿಕ್ರಿಯೆ ನೀಡಿದ್ದು, ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸಲೇಬೇಕು ಎಂದು ತಿಳಿಸಿದರು.
ಈಗಾಗಲೇ ಸಿದ್ಧಾರ್ಥ್ ಟ್ರಸ್ಟ್ ನಲ್ಲಿ ಅವ್ಯವಹಾರ ಆಗಿರೋದು ಜಗಜಾಹೀರು ಆಗಿದೆ ಛೆಲುವಾದಿ ನಾರಾಯಣಸ್ವಾಮಿ ಅವರು ಪ್ರಕರಣದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕೋರ್ಟ್ ನಲ್ಲಿ ತೀರ್ಮಾನ ಆಗಬೇಕಿದೆ. ನ್ಯಾಯ ಸಿಗುತ್ತದೆ. ಅದು ಸರ್ಕಾರಿ ಜಮೀನು ಅವ್ಯವಹಾರ ಆಗಿದೆ, ಉಳಿಯಬೇಕು. ಗ್ಯಾರೆಂಟಿ ತಪ್ಪಾಗಿದೆ, ಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುತ್ತದೆ. ಈ ವಿಚಾರದ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಆರ್ .ಅಶೋಕ ತಳಿಸಿದರು.
ಈ ವೇಳೆ ಶಾಸಕ ವಿಠಲ್ ಹಲಗೇಕರ್, ಮಾಜಿ ಶಾಸಕರಾದ ಅನಿಲ ಬೆನಕೆ, ಅರವಿಂದ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ಮಹಾಂತೇಶ ವಕ್ಕುಂದ ಸೇರಿ ಮತ್ತಿತರ ಸ್ಥಳೀಯ ಬಿಜೆಪಿ ನಾಯಕರು ಇದ್ದರು.



