HealthKannada NewsKarnataka News

*ಕೆಎಲ್‌ಇ ಶಿಕ್ಷಣ–ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಕೊಡುಗೆ ನೀಡಿದೆ: ಪ್ರಹ್ಲಾದ ಜೋಶಿ* *ಹುಬ್ಬಳ್ಳಿಯಲ್ಲಿ ಕಾಹೆರ್ ಜೆಜಿಎಂಎಂ ಮೆಡಿಕಲ್ ಕಾಲೇಜು, ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಲೋಕಾರ್ಪಣೆ*

ಕೆಎಲ್‌ಇ ಶಿಕ್ಷಣ–ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಕೊಡುಗೆ ನೀಡಿದೆ: ಪ್ರಹ್ಲಾದ ಜೋಶಿ
ಹುಬ್ಬಳ್ಳಿಯಲ್ಲಿ ಕಾಹೆರ್ ಜೆಜಿಎಂಎಂ ಮೆಡಿಕಲ್ ಕಾಲೇಜು, ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಲೋಕಾರ್ಪಣೆ


ಪ್ರಗತಿವಾಹಿನಿ ಸುದ್ದಿ/ ಹುಬ್ಬಳ್ಳಿ : ಏಳು ಜನ ಸಪ್ತರ್ಷಿಗಳಿಂದ ಆರಂಭಗೊಂಡ ಕೆಎಲ್‌ಇ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಹೆಮ್ಮೆಯಿಂದ ಗುರುತಿಸಿಕೊಳ್ಳುವ ಬೃಹತ್ ಶಿಕ್ಷಣ–ಆರೋಗ್ಯ ಸಂಸ್ಥೆಯಾಗಿ ಬೆಳೆದು ನಿಂತಿರುವುದು ಅತ್ಯಂತ ಶ್ಲಾಘನೀಯ. ಸಂಸ್ಥೆಯ ಆರಂಭಿಕ ಹಂತದಲ್ಲಿ ಏಳು ಜನ ಶಿಕ್ಷಕರು ಮಾಡಿದ ತ್ಯಾಗ ಮತ್ತು ಸೇವೆ ಮಹತ್ವದ್ದಾಗಿದ್ದು, ನಂತರದ ಅವಧಿಯಲ್ಲಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಕೆಎಲ್‌ಇಗೆ ನೀಡಿದ ಕೊಡುಗೆ ಮತ್ತು ಹೊಸ ಆಯಾಮವನ್ನು ಕಲ್ಪಿಸಿದ ರೀತಿ ಅದ್ಭುತವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Home add -Advt


ಹುಬ್ಬಳ್ಳಿಯ ಗಬ್ಬೂರಿನಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಕಾಹೆರ್) ಅಧೀನದ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ಮೆಡಿಕಲ್ ಕಾಲೇಜು (ಜೆಜಿಎಂಎಂಎಂಸಿ), ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮೂರುಸಾವಿರಮಠದ ಪೂಜ್ಯ ಲಿಂಗೈಕ್ಯ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಹಾಗೂ ಜಗದ್ಗುರು ರಾಜಯೋಗೀಂದ್ರ ಮಹಾಸ್ವಾಮಿಗಳ ಕೊಡುಗೆ ಅನನ್ಯವಾಗಿದೆ. ಅವರ ಭೂದಾನದಿಂದ ಕೆಎಲ್‌ಇ ಸಂಸ್ಥೆಗೆ ಈ ಭಾಗದಲ್ಲಿ ಬೃಹತ್ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆ ನಿರ್ಮಿಸಲು ಸಾಧ್ಯವಾಗಿದೆ. ಇದು ಹುಬ್ಬಳ್ಳಿ ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕ ಹಾಗೂ ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಜೋಶಿ ಹೇಳಿದರು.


ಕೆಎಲ್‌ಇ ಸಪ್ತರ್ಷಿಗಳು ಬಿತ್ತಿದ ಬೀಜಕ್ಕೆ ನೀರು–ಗೊಬ್ಬರ ನೀಡಿ ಅದನ್ನು ಬೃಹತ್ ವೃಕ್ಷವಾಗಿ ಬೆಳೆಸಿದ ಶ್ರೇಯಸ್ಸು ಡಾ. ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಹುಬ್ಬಳ್ಳಿಯ ಪ್ರಮುಖ ಭಾಗದಲ್ಲಿ 2020ರಿಂದಲೇ ಜೆಜಿಎಂಎಂ ಮೆಡಿಕಲ್ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವೂ ಸೇರ್ಪಡೆಯಾಗಿರುವುದು ಈ ಭಾಗದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ಮಹತ್ವದ ಮೈಲುಗಲ್ಲಾಗಿದೆ ಎಂದರು.
ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ: ಜೋಶಿ
ಭಾರತ ವಿಶ್ವದಲ್ಲೇ ಯುವ ಜನಸಂಖ್ಯೆ ಹೊಂದಿರುವ ಪ್ರಮುಖ ದೇಶವಾಗಿದೆ. ಜಾಗತಿಕ ಮಟ್ಟದಲ್ಲಿ ನುರಿತ ವೈದ್ಯರು, ತಂತ್ರಜ್ಞರು ಹಾಗೂ ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ಅಗತ್ಯ ಹೆಚ್ಚುತ್ತಿದೆ. ಭಾರತದ ಮೂಲ ಪರಂಪರೆಯಲ್ಲಿಯೇ ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಮಾನವೀಯ ಮೌಲ್ಯವಿದೆ. ವಿಶ್ವದ ಹಲವು ಅತ್ಯುತ್ತಮ ವೈದ್ಯರು ಭಾರತದಿಂದ ಬಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವೈದ್ಯರಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ಜೋಶಿ ಹೇಳಿದರು.
ಒಂದು ಕಾಲದಲ್ಲಿ ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಅಗತ್ಯವಿದ್ದ ಹಲವು ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಇಂದು ಅವುಗಳನ್ನು ಭಾರತದಲ್ಲೇ ಉತ್ಪಾದಿಸಿ ಜಗತ್ತಿಗೆ ರಫ್ತು ಮಾಡುವ ಸಾಮರ್ಥ್ಯವನ್ನು ದೇಶ ಪಡೆದುಕೊಂಡಿದೆ ಎಂದರು.


ವಿಶ್ವದ ಹಲವು ಭಾಗಗಳಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಯುದ್ಧದ ಪರಿಸ್ಥಿತಿಗಳಿದ್ದರೂ ಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅವರು ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ದೇಶದಲ್ಲಿ ಈಗ 751 ಮೆಡಿಕಲ್ ಕಾಲೇಜುಗಳಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಂತೆ 1,000 ಜನರಿಗೆ ಒಬ್ಬ ವೈದ್ಯರ ಗುರಿಯನ್ನು ಭಾರತ ಮೀರಿ ಮುನ್ನಡೆಯುವ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ನಡೆಯಲಿದೆ ಎಂದರು.
ಯುವಜನತೆಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸಿ ರಾಷ್ಟ್ರ ನಿರ್ಮಾಣದಲ್ಲಿ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ದೇಶದ ಮಾನವಶಕ್ತಿಯನ್ನು ಸದೃಢಗೊಳಿಸುವಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಜೋಶಿ ಹೇಳಿದರು.
ಕರ್ನಾಟಕ ವೈದ್ಯಕೀಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ: ಶರಣ ಪ್ರಕಾಶ ಪಾಟೀಲ
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ಕೊಡುಗೆ ಅನನ್ಯ ಮತ್ತು ಅನುಪಮವಾಗಿದೆ ಎಂದರು.
ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿಯೇ ಅತಿ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಕರ್ನಾಟಕದಲ್ಲಿವೆ. ವೈದ್ಯಕೀಯ ಶಿಕ್ಷಣದ ಜತೆಗೆ ನರ್ಸಿಂಗ್, ಫಿಸಿಯೋಥೆರಪಿ, ಡೆಂಟಲ್, ತಾಂತ್ರಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯವು ದೊಡ್ಡ ಪ್ರಮಾಣದ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ ಎಂದು ಹೇಳಿದರು.


ಗುಣಮಟ್ಟದ ಶಿಕ್ಷಣದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಸರ್ಕಾರದ ಜತೆಗೆ ಹಿಂದಿನ ತಲೆಮಾರಿನ ನಾಯಕರು, ಶಿಕ್ಷಣ ತಜ್ಞರು, ಮಠಮಾನ್ಯಗಳು ಹಾಗೂ ದಾನಿಗಳು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ರಾಜ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ ಎಂದರು.
1960ರ ದಶಕದಿಂದ ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತ ಬಂದಿವೆ. ಮಠಮಾನ್ಯಗಳ ವಿದ್ಯಾದಾಸೋಹದ ಪರಂಪರೆಯೂ ಇದಕ್ಕೆ ದೊಡ್ಡ ಕೊಡುಗೆ ನೀಡಿದೆ. ಗುಣಮಟ್ಟದ ಶಿಕ್ಷಣದ ಕಾರಣದಿಂದ ಇಂದು ಇಡೀ ಜಗತ್ತು ಕರ್ನಾಟಕದತ್ತ ನೋಡುತ್ತಿದೆ ಎಂದು ಶರಣ ಪ್ರಕಾಶ ಪಾಟೀಲ ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕೆಎಲ್‌ಇ ಸಂಸ್ಥೆ ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಸರ್ಕಾರ ಕೆಎಲ್‌ಇಯಂತಹ ಸಂಸ್ಥೆಗಳಿಗೆ ಸದಾ ಬೆಂಬಲ ನೀಡುತ್ತ ಬಂದಿದೆ ಎಂದರು.
ಮೂರುಸಾವಿರಮಠದ ಭೂದಾನ ಸಾರ್ಥಕವಾಗಿದೆ: ರಾಜಯೋಗೀಂದ್ರ ಮಹಾಸ್ವಾಮಿಗಳು
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರಮಠದ ಜಗದ್ಗುರು ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ, ಕೆಎಲ್‌ಇ ಸಂಸ್ಥೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಏಷ್ಯಾದಲ್ಲಿಯೇ ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಲಕ್ಷಾಂತರ ವಿದ್ಯಾರ್ಥಿಗಳು ಕೆಎಲ್‌ಇ ಸಂಸ್ಥೆಯ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವುದು ನಮ್ಮ ಗುರುಗಳ ಸಂಕಲ್ಪವಾಗಿತ್ತು. ಅವರ ಇಚ್ಛೆಯಂತೆ ಮೂರುಸಾವಿರಮಠದಿಂದ ಕೆಎಲ್‌ಇ ಸಂಸ್ಥೆಗೆ ಭೂಮಿ ನೀಡಲಾಗಿದೆ. ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ದೊಡ್ಡ ಮನಸ್ಸಿನಿಂದ ಆ ಸಂಕಲ್ಪವನ್ನು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು.
ಬಡವರ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ ನೀಡಿರುವ ಕೆಎಲ್‌ಇ ಸಂಸ್ಥೆ ಆಸ್ಪತ್ರೆಯಲ್ಲಿನ 300 ಹಾಸಿಗೆಗಳನ್ನು ಬಡವರಿಗಾಗಿ ಮೀಸಲಿಟ್ಟಿರುವುದು ಶ್ಲಾಘನೀಯ. ಕೆಎಲ್‌ಇಗೆ ಭೂಮಿ ನೀಡಿರುವುದು ಸಾರ್ಥಕವಾಗಿದೆ. ಈ ಆಸ್ಪತ್ರೆ ಹುಬ್ಬಳ್ಳಿ ಪ್ರದೇಶಕ್ಕೆ ಮುಕುಟಮಣಿಯಂತಾಗಿದೆ ಎಂದು ಅವರು ಹೇಳಿದರು.
ಈ ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಿದ ಶ್ರೇಯಸ್ಸು ಡಾ. ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.


110 ವರ್ಷಗಳ ಪಯಣದಲ್ಲಿ ಜಾಗತಿಕ ಸಂಸ್ಥೆಯಾಗಿ ಕೆಎಲ್‌ಇ: ಡಾ. ಪ್ರಭಾಕರ ಕೋರೆ
ಕಾಹೆರ್ ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, 110 ವರ್ಷಗಳ ಸುದೀರ್ಘ ಪಯಣದಲ್ಲಿ ಕೆಎಲ್‌ಇ ಸಂಸ್ಥೆ ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅದ್ವಿತೀಯ ಕೊಡುಗೆ ನೀಡುತ್ತ ಜಾಗತಿಕ ಮಟ್ಟದಲ್ಲಿ ಬೆಳೆದಿದೆ ಎಂದರು.
ಇಂದು ಕೆಎಲ್‌ಇ ಸಂಸ್ಥೆಯ 320 ಅಂಗಸಂಸ್ಥೆಗಳಲ್ಲಿ 1.48 ಲಕ್ಷ ವಿದ್ಯಾರ್ಥಿಗಳು ಹಾಗೂ 18 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಸಂಸ್ಥೆಯ ಬಹುದಿನಗಳ ಕನಸಾಗಿದ್ದ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಉದ್ಘಾಟನೆಗೊಂಡಿರುವುದು ತಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದರು.
ದಾನಿಗಳ ಕೊಡುಗೆಯಿಂದ ಬೆಳೆದ ಕೆಎಲ್‌ಇ
ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯಲ್ಲಿ ದಾನಿಗಳ ಪಾತ್ರವನ್ನು ಸ್ಮರಿಸಿದ ಡಾ. ಕೋರೆ, ಲಿಂಗರಾಜ ಟ್ರಸ್ಟ್, ರಾಜಾ ಲಖಮಗೌಡರು, ಬಿ.ವಿ. ಭೂಮರಡ್ಡಿ ಸೇರಿದಂತೆ ಅಸಂಖ್ಯಾತ ಮಹಾದಾನಿಗಳ ಕೊಡುಗೆಯನ್ನು ಸ್ಮರಿಸಿದರು.
ಅಥಣಿಯ ನೀಲವ್ವ ದುಂಡಪ್ಪ ಗಂಗಾವತಿ, ಸೊಲ್ಲಾಪುರದ ಕಾಡಾದಿ ಸಹೋದರರು, ಅಥಣಿಯ ರಣಮೋಡೆ ದಂಪತಿ, ಡಾ. ಮುರಗೇಶ ನಿರಾಣಿ, ಡಾ. ಸುಧಾ ಮೂರ್ತಿ, ಡಾ. ಸಂಪತಕುಮಾರ ಶಿವಣಗಿ ಸೇರಿದಂತೆ ಅನೇಕ ದಾನಿಗಳ ಸಹಕಾರದಿಂದ ಸಂಸ್ಥೆ ಬೃಹದಾಕಾರವಾಗಿ ಬೆಳೆದಿದೆ ಎಂದರು.
ಮೂರುಸಾವಿರಮಠದ ಕೊಡುಗೆ ವಿಶೇಷವಾಗಿ ಸ್ಮರಣೀಯ. 1947ರಲ್ಲಿ ಹುಬ್ಬಳ್ಳಿಯಲ್ಲಿ ಕಾಮರ್ಸ್ ಕಾಲೇಜು ಆರಂಭಿಸುವ ಸಂದರ್ಭದಲ್ಲಿ ಸಾರ್ವಜನಿಕರು ₹1 ಲಕ್ಷ, ಮೂರುಸಾವಿರಮಠದ ಜಗದ್ಗುರುಗಳು ₹1 ಲಕ್ಷ ಹಾಗೂ 9 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಅದರಿಂದಾಗಿ ಕಾಲೇಜಿಗೆ ಜಗದ್ಗುರು ಗಂಗಾಧರ ಕಾಮರ್ಸ್ ಕಾಲೇಜು ಎಂದು ನಾಮಕರಣ ಮಾಡಲಾಗಿತ್ತು ಎಂದು ಅವರು ವಿವರಿಸಿದರು.
ಇದೀಗ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಮೂರುಸಾವಿರಮಠದ ಜಗದ್ಗುರು ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು ತಮ್ಮ ಗುರುಗಳಾದ ಲಿಂಗೈಕ್ಯ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಇಚ್ಛೆಯಂತೆ 23 ಎಕರೆ 32 ಗುಂಟೆ ಭೂಮಿಯನ್ನು ಕೆಎಲ್‌ಇ ಸಂಸ್ಥೆಗೆ ದಾನವಾಗಿ ನೀಡಿದ್ದಾರೆ. ಈ ಭೂಮಿಯಲ್ಲಿ ಸುಮಾರು 50 ಎಕರೆ ಪ್ರದೇಶದ ಸಮಗ್ರ ಯೋಜನೆಯಲ್ಲಿ ₹700 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ನಿರ್ಮಾಣಗೊಂಡಿದೆ ಎಂದು ಡಾ. ಕೋರೆ ಹೇಳಿದರು.
ಹುಬ್ಬಳ್ಳಿ ಜನತೆಯ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಬೆಳಗಾವಿಗೆ ಮಾತ್ರ ಸೀಮಿತವಾಗದೆ ಕೆಎಲ್‌ಇ ಸಂಸ್ಥೆ ಹುಬ್ಬಳ್ಳಿಯಲ್ಲೂ ತನ್ನ ಸೇವಾ ವಿಸ್ತರಣೆ ಮಾಡಿದೆ ಎಂದರು.


4,500 ಹಾಸಿಗೆಗಳ ಆರೋಗ್ಯ ಸೇವೆ: ಡಾ. ಕೋರೆ
ಕೆಎಲ್‌ಇ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಒಟ್ಟು 4,500 ಹಾಸಿಗೆಗಳ ಆರೋಗ್ಯ ಆರೈಕೆ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ 1,200 ಹಾಸಿಗೆಗಳನ್ನು ಉಚಿತ ಆರೋಗ್ಯ ಸೇವೆಗಾಗಿ ಮೀಸಲಿಡಲಾಗಿದೆ ಎಂದು ಡಾ. ಕೋರೆ ತಿಳಿಸಿದರು.
ಬೆಳಗಾವಿ, ಪುಣೆ, ಹುಬ್ಬಳ್ಳಿ, ಅಂಕೋಲಾ, ಚಿಕ್ಕೋಡಿ, ಗೋಕಾಕ, ಬೆಂಗಳೂರು ಸೇರಿದಂತೆ ವಿವಿಧೆಡೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 16 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆಗಳ ಜತೆಗೆ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನರಿಗೆ ವೈದ್ಯಕೀಯ ಸೇವೆ ತಲುಪಿಸುವ ಉದ್ದೇಶದಿಂದ ಸ್ಯಾಟಲೈಟ್ ಕ್ಲಿನಿಕ್‌ಗಳನ್ನೂ ಸ್ಥಾಪಿಸಲಾಗಿದೆ ಎಂದರು.
ಬೈಲಹೊಂಗಲ, ಗೋಕಾಕ, ನಿಪ್ಪಾಣಿ, ಚಿಕ್ಕೋಡಿ, ಯಳ್ಳೂರು, ಪಾಟ್ನೆ-ಫಾಟಾ ಹಾಗೂ ಹಿಂಡಲಗಾ ಸೇರಿದಂತೆ ಹಲವು ಕಡೆ ದಂತ ವೈದ್ಯಕೀಯ ಸ್ಯಾಟಲೈಟ್ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ.
ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಇದುವರೆಗೆ 14 ಹೃದಯ ಕಸಿ, 30 ಯಕೃತ್ ಕಸಿ ಹಾಗೂ 131 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅವರು ಹೇಳಿದರು.
ಮಾಜಿ ನಿರ್ದೇಶಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅವರನ್ನು ಮಹಾಂತೇಶ ಕೌಜಲಗಿ ಹಾಗೂ ಅಮಿತ್ ಕೋರೆ ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ಮಹಾಂತೇಶ ಕೌಜಲಗಿ ವಹಿಸಿದ್ದರು. ಕಾರ್ಯಾಧ್ಯಕ್ಷ ಅಮಿತ್ ಕೋರೆ ವಂದಿಸಿದರು. ಡಾ. ಅವಿನಾಶ ಕವಿ ಕಾರ್ಯಕ್ರಮ ನಿರೂಪಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ಆಶಾ ಪ್ರಭಾಕರ ಕೋರೆ, ಕಾಹೆರ್ ಕುಲಪತಿ ಸಂದೀಪ ಶ್ರೀವಾತ್ಸವ, ಕೆಎಲ್‌ಇ ಮಾಜಿ ನಿರ್ದೇಶಕರಾದ ಬಾಬಣ್ಣ ಮೆಟಗುಡ್ಡ, ಡಾ. ವಿ.ಎಸ್. ಸಾಧುನವರ, ಉಪಾಧ್ಯಕ್ಷ ಬಸವರಾಜ ತಟವಟಿ, ಹಾಲಿ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಎಂ.ಸಿ. ಕೊಳ್ಳಿ, ವೈ.ಎಸ್. ಪಾಟೀಲ, ಅನೀಲ ಪಟ್ಟೇದ, ಬಸವರಾಜ ಪಾಟೀಲ, ಜಯಾನಂದ ಮುನವಳ್ಳಿ, ಡಾ. ವಿಶ್ವನಾಥ ಪಾಟೀಲ, ಪ್ರವೀಣ ಬಾಗೇವಾಡಿ, ಡಾ. ಪ್ರೀತಿ ದೊಡವಾಡ, ವಿಜಯ ಮೆಟಗುಡ್, ಮಂಜುನಾಥ ಮುನವಳ್ಳಿ, ಕಾರ್ಯದರ್ಶಿಗಳಾದ ಡಾ. ಸುನೀಲ ಜಲಾಲಪುರೆ, ಡಾ. ಅಶೋಕ ಶೆಟ್ಟರ ಸೇರಿದಂತೆ ಕೆಎಲ್‌ಇ ಸಂಸ್ಥೆಯ ವಿವಿಧ ಶಾಲಾ–ಕಾಲೇಜುಗಳ ಪ್ರಾಂಶುಪಾಲರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹುಬ್ಬಳ್ಳಿ–ಧಾರವಾಡದ ಗಣ್ಯರು ಉಪಸ್ಥಿತರಿದ್ದರು.

Related Articles

Back to top button