Kannada NewsLatestNational

*ಗಣೇಶೋತ್ಸವದ ವೇಳೆ ವಿದ್ಯುತ್ ಅವಘಡ: ಇಬ್ಬರು ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಗಣಪತಿ ಪೆಂಡಾಲ್ ಗೆ ವಿದ್ಯುತ್ ಪ್ರವಹಿಸಿ ಎಂಟು ವರ್ಷದ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

Home add -Advt

ಮುಂಬೈನ ಪ್ರಸಿದ್ಧ ಲಾಲ್‌ಬಾಗ್-ಕಲಾಚೌಕಿ ಪ್ರದೇಶದಲ್ಲಿ ಇಂದು ಮುಂಜಾನೆ ಗಣಪತಿ ದರ್ಶನಕ್ಕೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ. ಕಲಾಚೌಕಿ ವಿಭಾಗ್ ಸಾರ್ವಜನಿಕ ಉತ್ಸವ ಮಂಡಲದ ಪ್ರವೇಶದ್ವಾರದ ಬಳಿ ಇದ್ದ ತಾತ್ಕಾಲಿಕ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನೆಲದ ಮೇಲೆ ವಿದ್ಯುತ್ ಪ್ರವಹಿಸಿದ್ದು, ಪರಿಣಾಮ ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ 12 ವರ್ಷದ ಮತ್ತೊಬ್ಬ ಬಾಲಕಿ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮುಂಜಾನೆ 2.20 ರ ಸುಮಾರಿಗೆ ಭಕ್ತರ ಭಾರೀ ಜನಸಂದಣಿಯ ನಡುವೆಯೇ ಈ ದುರ್ಘಟನೆ ನಡೆದಿದೆ.

ಪ್ರವೇಶದ್ವಾರದ ಬಳಿ ಇದ್ದ ತಾತ್ಕಾಲಿಕ ಕುಡಿಯುವ ನೀರು ಮತ್ತು ತಂಪು ಪಾನೀಯ ಅಂಗಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಜಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ತಕ್ಷಣವೇ ಸುತ್ತಲಿನ ಪ್ರದೇಶದಲ್ಲಿ ಕರೆಂಟ್ ಹರಿದು ಆರು ಮಂದಿ ಆಘಾತಕ್ಕೊಳಗಾಗಿದ್ದಾರೆ. 8 ವರ್ಷದ ರಾಗಿಣಿ ಯಾದವ್ ಹಾಗೂ 33 ವರ್ಷದ ಸುಜಾತ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

12 ವರ್ಷದ ರುಹಿ ಸಿಂಗ್ ಎಂಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ಅಕ್ಬರ್ ನಾಯಕ್ (19, ತನ್ವಿ ನರೇಶ್ ಹಂಡೆ (19) ಮತ್ತು ಸಾಹಿಲ್ ಸಂದೀಪ್ ತಾರೆ (19) ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಜನಸಂದಣಿ ಹೆಚ್ಚಿದ್ದರಿಂದ ದರ್ಶನ ಮಾಡದೆ ಹೊರಡಲು ತೀರ್ಮಾನಿಸಿ ಪಕ್ಕದ ಅಂಗಡಿ ಬಳಿ ನಿಂತಿದ್ದೆವು. ಅಲಂಕಾರಿಕ ದೀಪಗಳ ಸುರಕ್ಷತೆ ಬಗ್ಗೆ ಮಂಡಳಿಯವರು ಕಾಳಜಿ ವಹಿಸಬೇಕಿತ್ತು. ನಮ್ಮ ಮುಗ್ಧ ಮಗುವನ್ನು ಯಾರು ಮರಳಿ ತರುತ್ತಾರೆ? ಎಂದು ಬಾಲಕಿಯ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಮುಂಬೈ ಅಗ್ನಿಶಾಮಕ ದಳ ಮತ್ತು ಬೆಸ್ಟ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸ್ಥಳೀಯ ಎಲೆಕ್ಟ್ರಿಷಿಯನ್ ಅಳವಡಿಸಿದ್ದ ತಾತ್ಕಾಲಿಕ ಮೀಟರ್ ಮತ್ತು ವೈರಿಂಗ್ ಲೋಪಗಳ ಕುರಿತು ಕಲಾಚೌಕಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

Back to top button