
ಪ್ರಗತಿವಾಹಿನಿ ಸುದ್ದಿ: ಮಳೆ ಕೊರತೆ, ಬರಗಾಲದಿಂದ ಸಂಕಷ್ಟಕ್ಕೀಡಾಗಿದ್ದ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸುಮಾರು 46 ರಿಂದ 50 ಲಕ್ಷ ರೈತರಿಗೆ ಇನ್ಪುಟ್ ಸಬ್ಸಿಡಿ ನೀಡುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ನಡೆದ ಚರ್ಚೆಯಲ್ಲಿ ಮಾಅತನಾಡಿದ ಡಿಸಿಎಂ ಪರಮೇಶ್ವರ್, ರಾಜ್ಯದ ಸುಮಾರು 46 ರಿಂದ 50 ಲಕ್ಷ ರೈತರಿಗೆ ತಲಾ 2,500 ರೂಪಾಯಿಗಳ ಇನ್ಪುಟ್ ಸಬ್ಸಿಡಿ ನೀಡುವುದಾಗಿ ತಿಳಿಸಿದರು.
150 ವರ್ಷಗಳ ಬಳಿಕ ಸೂಪರ್ ಎಲ್ ನಿನೋ ದಿಂದಾಗಿ ತೀವ್ರ ಬರಗಾಲ ಎದುರಾಗಿದೆ. ಈ ಐತಿಹಾಸಿಕ ಬರಗಾಲದಲ್ಲಿ ಸರ್ಕಾರ ಸಂಪೂರ್ಣವಾಗಿ ರೈತರ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಈ ತೀರ್ಮಾನವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇದಕ್ಕಾಗಿ ಸರ್ಕಾರ 1,250 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ತಿಳಿಸಿದರು.
ಕೇವಲ ಯಾರೋ ಪ್ರತಿಭಟನೆ ನಡೆಸಿದರು ಅಥವಾ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದರು ಎಂಬ ಕಾರಣಕ್ಕೆ ಸರ್ಕಾರ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿಲ್ಲ. ಕೇಂದ್ರ ಸರ್ಕಾರದ ನಿಗದಿತ ಮಾರ್ಗಸೂಚಿ ಮತ್ತು ಮಾನದಂಡಗಳಿಗೆ ಒಳಪಟ್ಟ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಇಂಥದ್ದೇ ತಾಲೂಕುಗಳನ್ನು ಸೇರಿಸಬೇಕೆಂದು ನಾವು ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಒಂದು ವೇಳೆ ಒತ್ತಡ ಹೇರಿರುವುದು ಸಾಬೀತಾದರೆ ಯಾವುದೇ ಶಿಕ್ಷೆಗೂ ಸಿದ್ಧ. ಇನ್ನೂ ಕೆಲವು ಅರ್ಹ ತಾಲೂಕುಗಳ ಪಟ್ಟಿ ಪರಿಶೀಲನೆಯಲ್ಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 40 ಸಾವಿರ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಹೀಗಾಗಿ ರಾಜ್ಯದ ಭೀಕರ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಕೋರಲು ಶೀಘ್ರದಲ್ಲೇ ನಿಯೋಗದೊಂದಿಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ದಾಖಲೆ ಪ್ರಮಾಣದ 49 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಬೆಳೆ ವಿಮೆ ಯೋಜನೆಯಡಿ ರಾಜ್ಯ ಸರ್ಕಾರದ ಪಾಲಿನ 1,242 ಕೋಟಿ ರೂ. ಮೊತ್ತವನ್ನು ಸರ್ಕಾರ ಒದಗಿಸಲಿದೆ. 16ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಎಸ್ಡಿಆರ್ಎಫ್ನಿಂದ 922 ಕೋಟಿ ರೂ. ಬರಬೇಕಿದ್ದು, ಈವರೆಗೆ 446 ಕೋಟಿ ರೂ. ಬಂದಿದೆ. ಬಾಕಿ ಮೊತ್ತ ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು.ಇದೇ ವೇಳೆ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.




