Kannada NewsKarnataka NewsLatest

*ಸೀನಿಯರ್‌ಗಳಿಂದ ಇಬ್ಬರು ಕಿರಿಯ ವಿದ್ಯಾರ್ಥಿಗಳ ಮೇಲೆ ಅಮಾನುಷ ರ‍್ಯಾಗಿಂಗ್*: *9 ಮಂದಿ ವಿರುದ್ಧ FIR*

ಪ್ರಗತಿವಾಹಿನಿ ಸುದ್ದಿ: ನಗರದ ಪಾಂಡೇಶ್ವರದಲ್ಲಿರುವ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಿಗೆ ಸೀನಿಯರ್‌ ವಿದ್ಯಾರ್ಥಿಗಳು ಸಿನಿಮೀಯ ರೀತಿಯಲ್ಲಿ ಕಿರುಕುಳ ನೀಡಿ, ಬೈಕ್‌ನಲ್ಲಿ ಅಪಹರಿಸಿ ನಿರ್ಜನ ಮನೆಯೊಂದರ ಕೊಠಡಿಯಲ್ಲಿ ಕೂಡಿಹಾಕಿ ಬಟ್ಟೆ ಬಿಚ್ಚಿಸಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಸೀನಿಯರ್‌ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮಂಗಳೂರು ಪಾಂಡೇಶ್ವರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಕೇರಳದ ತ್ರಿಶೂರ್ ಮೂಲದ 19 ವರ್ಷದ ವಿದ್ಯಾರ್ಥಿ ದೂರು ನೀಡಿದ್ದು, ಅವರ ಸಹಪಾಠಿಯೂ ಗಂಭೀರ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಕೊಲೆ ಯತ್ನ, ಅಪಹರಣ ಹಾಗೂ ರ‍್ಯಾಗಿಂಗ್‌ಗೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 19ರಂದು ಮಧ್ಯಾಹ್ನ ಇಬ್ಬರು ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಸೀನಿಯರ್‌ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ಅಡ್ಡಗಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಇಬ್ಬರನ್ನೂ ಬಲವಂತವಾಗಿ ಎಳೆದುಕೊಂಡು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದು, ಇದನ್ನು ಪ್ರಶ್ನಿಸಿದಾಗ ಕೈಗಳಿಂದ ಥಳಿಸಿದ್ದಾರೆ. ನಂತರ ನಿರ್ಜನ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿನ ಕೊಠಡಿಯಲ್ಲಿ ಇಬ್ಬರನ್ನೂ ಕೂಡಿಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೊಠಡಿಯಲ್ಲಿ ಇಬ್ಬರು ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಕೇವಲ ಚಡ್ಡಿಯಲ್ಲಿ ನಿಲ್ಲಿಸಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿದ್ಯಾರ್ಥಿಗಳು ಚೀರಾಡಿದಾಗ ಬಾಯಿಗೆ ಬಟ್ಟೆ ಒತ್ತಿ ಹಿಡಿದು, ಬೆಲ್ಟ್ ಮತ್ತು ಹ್ಯಾಂಗರ್‌ನಿಂದ ಥಳಿಸಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಒಬ್ಬಾತ ಕೊಲ್ಲುವ ಉದ್ದೇಶದಿಂದಲೇ ಕುತ್ತಿಗೆ ಮತ್ತು ತಲೆಗೆ ಗುರಿಯಾಗಿಸಿ ಕಬ್ಬಿಣದ ಪಂಚ್‌ನಿಂದ ಹೊಡೆದಿದ್ದಾನೆ ಎಂದು ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಆರೋಪಿಗಳು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಹಲ್ಲೆಯಿಂದ ಬಸವಳಿದ ವಿದ್ಯಾರ್ಥಿಗಳು ಕುಡಿಯಲು ನೀರು ಕೇಳಿದಾಗ, ಕಲುಷಿತ ನೀರನ್ನು ತಂದುಕೊಟ್ಟಿದ್ದು, ಅದನ್ನು ಕುಡಿಯಲು ನಿರಾಕರಿಸಿದಾಗ ಮೈಮೇಲೆ ಚೆಲ್ಲಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರ‍್ಯಾಗಿಂಗ್ ಘಟನೆ ಕುರಿತು ಪೊಲೀಸರಿಗೆ ಅಥವಾ ಬೇರೆಯವರಿಗೆ ಮಾಹಿತಿ ನೀಡಿದರೆ ಕಾಲೇಜಿನಲ್ಲೇ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸುವುದಾಗಿ ಜೀವ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸಂಜೆ ಸುಮಾರು 6 ಗಂಟೆಯವರೆಗೆ ಇಬ್ಬರನ್ನೂ ಕೊಠಡಿಯಲ್ಲಿ ಕೂಡಿಹಾಕಿ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.

ಬಳಿಕ ಕಾಲೇಜಿಗೆ ಬಂದಾಗಲೂ ಕ್ಲೀನ್ ಶೇವ್ ಮಾಡಿಕೊಂಡೇ ತರಗತಿಗೆ ಬರಬೇಕು ಹಾಗೂ ಶೂ ಧರಿಸಬಾರದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದ ಭಯಭೀತರಾದ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಕುಟುಂಬಸ್ಥರು ಧೈರ್ಯ ನೀಡಿದ ಬಳಿಕ ಮಂಗಳೂರಿಗೆ ಮರಳಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ದೂರು ಸ್ವೀಕರಿಸಿದ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ನಾಸೀದ್ ಅಮೀರ್, ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿ.ಪಿ., ರೆಹಾನ್ ಎಂ.ಪಿ. ಹಾಗೂ ಶಿನಾಸ್ ಎಂಬ 9 ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಲೆ ಯತ್ನ, ಅಪಹರಣ, ಅಕ್ರಮ ಬಂಧನ, ಹಲ್ಲೆ ಹಾಗೂ ರ‍್ಯಾಗಿಂಗ್‌ಗೆ ಸಂಬಂಧಿಸಿದಂತೆ BNS ಕಲಂ 140(3), 127(2), 115(2), 118(1), 351(2), 109, 190 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 116ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

Related Articles

Back to top button