*ಮತ್ತೋರ್ವ ಅಪ್ರಾಪ್ತಳ ಮೇಲೆ ಯುವಕರ ಗುಂಪಿನಿಂದ ಲೈಂಗಿಕ ಕಿರುಕುಳ: ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಯುವತಿಯ ಮೇಲೆ ಯುವಕರ ಗುಂಪೊಂದು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಜಮುಯಿ ಘಟನೆ ಬಳಿಕಿ ನಡೆದ ಮತ್ತೊಂದು ಘಟನೆ ಇದಾಗಿದೆ.
ಬಿಹಾರದ ಬಂಕಾ ಜಿಲ್ಲೆಯ ಮಂದಾರ್ ಹಿಲ್‌ನಲ್ಲಿ ಯುವಕರ ಗುಂಪೊಂದು ಅಪ್ರಾಪ್ತಳಿಗೆ ಕಿರುಕುಳ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಮುಯಿ ಮತ್ತು ಸಮಸ್ತಿಪುರದಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದವು. ಒಂದು ವಾರದ ಅವಧಿಯಲ್ಲಿ ಬಿಹಾರದಲ್ಲಿ ನಡೆದ 3ನೇ ಘಟನೆ ಇದಾಗಿದೆ.
ವಾಟ್ಸಪ್ ನಲ್ಲಿ ಈ ವಿಡಿಯೋ ಗಮನಿಸಿದ ಪೊಲೀಸರು ಬೌನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ವಿಡಿಯೋ ಜೂನ್ 3ರಂದು ಚಿತ್ರೀಕರಿಸಿರುವ ಸಾಧ್ಯತೆ ಇದೆ. ಘಟನೆ ನಡೆದ ಸಂದರ್ಭ ಮತ್ತು ಅದರ ಹಿನ್ನೆಲೆಯನ್ನ ಖಚಿತಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ.
ಬಾಲಕಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಂದಾರ್ ಹಿಲ್‌ಗೆ ತೆರಳಿದ್ದಳು. ಈ ವೇಳೆ ಮೂವರು ಯುವಕರು ಅವರನ್ನ ನಿಂದಿಸಿ, ಬೆದರಿಕೆ ಹಾಕಿ, ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಆರೋಪಿಗಳನ್ನು ಅಬ್ದುಲ್ಲಾ, ನಿತೀಶ್ ಕುಮಾರ್ ರೈ ಮತ್ತು ವಿಕಾಸ್ ಕುಮಾರ್ ಎಂದು ಪೊಲಿಸರು ಗುರುತಿಸಿದ್ದಾರೆ. ಅವರಲ್ಲಿ ಅಬ್ದುಲ್ಲಾ, ಬಾಲಕಿಯ ಸ್ನೇಹಿತನ ಖಾತೆಯಿಂದ ಆನ್‌ಲೈನ್ ಮೂಲಕ 1,500 ರೂ. ಪಡೆದುಕೊಂಡ ಬಳಿಕ ಅವರನ್ನ ಅಲ್ಲಿಂದ ತೆರಳಲು ಅವಕಾಶ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ವಿಡಿಯೋ ಹಂಚಿಕೊಂಡು ಅಪ್ರಾಪ್ತಳ ಗುರುತು ಬಹಿರಂಗಕ್ಕೆ ಯತ್ನಿಸಿದವರ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದಾರೆ.




