*ರನ್ಯಾ ರಾವ್ಗೆ ಬಿಗ್ ಶಾಕ್*: *89.91 ಕೋಟಿ ರೂ. ದಂಡ ವಿಧಿಸಿದ ಕಸ್ಟಮ್ಸ್*

ಪ್ರಗತಿವಾಹಿನಿ ಸುದ್ದಿ: ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ಗೆ ಭಾರೀ ದಂಡ ವಿಧಿಸಲಾಗಿದೆ. ಕಸ್ಟಮ್ಸ್ ಇಲಾಖೆ ಬರೋಬ್ಬರಿ 89.91 ಕೋಟಿ ರೂ. ದಂಡ ವಿಧಿಸಿ ಸುದೀರ್ಘ ಆದೇಶ ಹೊರಡಿಸಿದ್ದು, ಪ್ರಕರಣದ ತನಿಖೆಯಲ್ಲಿನ ಹಲವು ಅಂಶಗಳು ಇದೀಗ ಬಹಿರಂಗವಾಗಿವೆ.
ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಹೊರಡಿಸಿರುವ 399 ಪುಟಗಳ ಆದೇಶದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಉಲ್ಲೇಖಿಸಲಾಗಿದೆ. ದಂಡದ ಮೊತ್ತ ಹಾಗೂ ಆದೇಶದ ಅಧಿಕೃತ ಪ್ರತಿಯನ್ನು ರನ್ಯಾ ರಾವ್ಗೆ ಕಳುಹಿಸಲಾಗಿದೆ.
ತನಿಖೆಯ ಪ್ರಕಾರ, 2024ರ ಮಾರ್ಚ್ 7ರಿಂದ 2025ರ ಫೆಬ್ರವರಿ 2ರ ಅವಧಿಯಲ್ಲಿ ದುಬೈನಿಂದ ಭಾರತಕ್ಕೆ 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವ ಆರೋಪ ಪ್ರಕರಣದಲ್ಲಿದೆ. ರನ್ಯಾ ರಾವ್ ಜೊತೆ ತರುಣ್ ಸೇರಿದಂತೆ ಮತ್ತೂ ಮೂವರು ಸಹ ಆರೋಪಿಗಳು ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
2025ರ ಮಾರ್ಚ್ 2ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಬಂಧಿಸಿದ್ದರು. ತಪಾಸಣೆ ವೇಳೆ ಸುಮಾರು 12 ಕೋಟಿ ರೂ. ಮೌಲ್ಯದ 14.8 ಕೆ.ಜಿ. ವಿದೇಶಿ ಮೂಲದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು.
ಇದಕ್ಕೂ ಮುನ್ನ ರನ್ಯಾ ರಾವ್ ನಿವಾಸದ ಮೇಲೆ DRI ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 2.5 ಕೋಟಿ ರೂ. ನಗದು ಹಾಗೂ ಸುಮಾರು 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು ಎಂದು ತನಿಖಾ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಪತ್ತೆಯಾದ ಚಿನ್ನಾಭರಣಗಳಲ್ಲಿ ಪಚ್ಚೆ ಕುಂದನ್ ಮೋಪು ನೆಕ್ಲೇಸ್, ವಜ್ರ ಮತ್ತು ಕೆಂಪು ಹರಳುಗಳ ವಂಕಿ, ಪೋಲ್ಕಿ ಕೆಂಪು ಜುಮುಕಿ, ಮುತ್ತಿನ ಮಾಟಿಲ್, ಹಸಿರು ಹರಳಿನ ಬಳೆ, ಕುಂದನ್ ನೆಕ್ಲೇಸ್ ಸೆಟ್, ಕುಂದನ್ ಹಾರ, ವಜ್ರ ಮತ್ತು ಪಚ್ಚೆ ಕಿವಿಯೋಲೆಗಳು, ಮುತ್ತಿನ ನೆಕ್ಲೇಸ್, ಪದಕ ಹಾಗೂ ಕರಿಮಣಿ ಸರ ಸೇರಿದಂತೆ ಹಲವು ಆಭರಣಗಳಿವೆ.
ಈ ಚಿನ್ನಾಭರಣಗಳ ಫೋಟೋಗಳು ಹಾಗೂ ವಿವರವಾದ ಪಟ್ಟಿಯೂ ತನಿಖಾ ದಾಖಲೆಗಳಲ್ಲಿ ಸೇರಿದೆ ಎಂದು ತಿಳಿದುಬಂದಿದೆ. ವಶಪಡಿಸಿಕೊಂಡ ವಸ್ತುಗಳ ಮೂಲ ಹಾಗೂ ಪ್ರಕರಣದಲ್ಲಿ ಅವುಗಳ ಸಂಬಂಧದ ಕುರಿತು ತನಿಖೆ ನಡೆಸಲಾಗಿದೆ.
ಇನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯವು 2025ರ ಮೇನಲ್ಲಿ ರನ್ಯಾ ರಾವ್ಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಬಳಿಕ ಕೇಂದ್ರ ಸರ್ಕಾರ COFEPOSA ಕಾಯ್ದೆಯಡಿ ಬಂಧನ ಆದೇಶ ಜಾರಿಗೊಳಿಸಿದ್ದರಿಂದ ತಕ್ಷಣ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಿರಲಿಲ್ಲ. COFEPOSA ಕಾಯ್ದೆಯಡಿ ಕಳ್ಳಸಾಗಣೆ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧನಕ್ಕೆ ಅವಕಾಶವಿದೆ. ಇದೀಗ ಕಸ್ಟಮ್ಸ್ ಇಲಾಖೆಯ 89.91 ಕೋಟಿ ರೂ. ದಂಡದ ಆದೇಶ ಪ್ರಕರಣಕ್ಕೆ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




