
ಪ್ರಗತಿವಾಹಿನಿ ಸುದ್ದಿ: ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪ್ರಕರಣದ ಮರು ತನಿಖೆ ಇಂದಿನಿಂದ ಆರಂಭವಾಗಿದೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಹೊಸ ತನಿಖಾ ತಂಡ ರಚನೆಯಾಗಿದ್ದು, ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿದೆ. ಹೊಸ ತನಿಖಾ ತಂಡದಲ್ಲಿ 16 ಅಧಿಕಾರಿಗಳು ಇದ್ದು, ಇಂದು ಮಂಗಳೂರಿಗೆ ಎಸ್ ಐಟಿ ಟೀಂ ಆಗಮಿಸಿದೆ.
ಮಂಗಳೂರು ಪೊಲೀಸ್ ಆಯುಕ್ತರೂ ಆಗಿರುವ ಎಸ್ ಐಟಿ ಅಧಿಕಾರಿ ಸುಧೀರ್ಬ್ ಕುಮಾರ್ ರೆಡ್ಡಿಯನ್ನು ಎಸ್ ಐಟಿ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲಾಸರ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇಂದಿನಿಂದ ಪ್ರಕರಣದ ಮರು ತನಿಖೆ ಅಧಿಕೃತವಾಗಿ ಆರಂಭವಾಗಲಿದೆ.
2012ರಲ್ಲಿ ಧರ್ಮಸ್ಥಳದಲ್ಲಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಪ್ರಕರಣದ ಮರುತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2026ರಲ್ಲಿ ಆದೇಶಿಸಿದೆ.
17 ವರ್ಷದ ಸೌಜನ್ಯಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವು 2012ರಲ್ಲಿ ಧರ್ಮಸ್ಥಳದ ಬಳಿ ನಡೆದಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಸಂತೋಷ್ ರಾವ್ ಎಂಬಾತನನ್ನು 2023ರ ಜೂನ್ 16ರಂದು ಸಿಬಿಐ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿತ್ತು. ಹಿಂದಿನ ಸಿಐಡಿ ಹಾಗೂ ಸಿಬಿಐ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮರುತನಿಖೆಗಾಗಿ ಎಸ್ಐಟಿ (SIT) ರಚಿಸುವಂತೆ ನಿರ್ದೇಶಿಸಿದೆ.
ಕರ್ನಾಟಕ ಸರ್ಕಾರವು ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. 14 ವರ್ಷಗಳ ಬಳಿಕ ಮರುತನಿಖೆ ನಡೆಯುತ್ತಿರುವುದರಿಂದ ಸಾಕ್ಷ್ಯ ಹಾಗೂ ಫೋರೆನ್ಸಿಕ್ ಆಧಾರಗಳನ್ನು ಕಲೆಹಾಕಲು ಎಸ್ಐಟಿ ತಂಡಕ್ಕೆ ಸವಾಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


