Kannada NewsKarnataka NewsPolitics

*ನಾನು ವಿಫಲನಾಗಿದ್ದೇನೆ; ಇದನ್ನು ಒಪ್ಪಿಕೊಳ್ಳುತ್ತೇನೆ ಎಂದ ಡಿ.ಕೆ.ಶಿವಕುಮಾರ್!*

ಪ್ರಗತಿವಾಹಿನಿ ಸುದ್ದಿ: ಜನರ ಮತವನ್ನು ಕಾಪಾಡಲು ಮುಖ್ಯಮಂತ್ರಿಯಾಗಿ ಹಾಗೂ ಪ್ರಜಾಸೇವಕನಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ, ಇದರಲ್ಲಿ ವಿಫಲನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್) ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಎಸ್​ಐಆರ್​​ನಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿರುವುದನ್ನು ಎಲ್ಲರೂ ಗಮನಿಸಬೇಕು. ಜನರ ಮತವನ್ನು ಕಾಪಾಡಲು ಮುಖ್ಯಮಂತ್ರಿಯಾಗಿ ಹಾಗೂ ಪ್ರಜಾಸೇವಕನಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ, ಇದರಲ್ಲಿ ವಿಫಲನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶ ರವಾನಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ಒಂದು ಕೋಟಿಗೂ ಹೆಚ್ಚು ಮತಗಳು ಕಡಿಮೆಯಾಗಿರುವುದನ್ನು ಗಮನಿಸಿದ್ದೀರಿ. ಇದು ವಿವಿಧ ಕಾರಣಗಳಿಂದ ಆಗಿರಬಹುದು. ಆದರೆ, 50 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಇನ್ನೂ ಮೂರು ದಿನಗಳ ಒಳಗೆ ಅರ್ಜಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಕೆಲ ಬಿಜೆಪಿ ನಾಯಕರು ತಮ್ಮ ನಾಯಕರ ನಿರ್ದೇಶನದ ಮೇರೆಗೆ ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳನ್ನು ತೆಗೆದುಹಾಕಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕಾಗಿ ಫಾರ್ಮ್-7 ನೀಡಲಾಗುತ್ತಿದೆ ಎಂದು ಸಿಎಂ ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ನಾಯಕರು ದಾಖಲೆಗಳನ್ನು ನೀಡಿದ್ದಾರೆ. ಈ ಬಗ್ಗೆ ಕ್ರಿಮಿನಲ್ ತನಿಖೆಯ ಅಗತ್ಯವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಮತವನ್ನು ಉಳಿಸುವುದು ತಮ್ಮ ಕರ್ತವ್ಯ ಎಂದಿದ್ದಾರೆ.

BLA-1, BLA-2 ಹಾಗೂ BLOಗಳಿಗೆ ಅರ್ಜಿ ನೀಡಿ ಮತಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಈ ಬಗ್ಗೆ ಸಾರ್ವಜನಿಕರ ಬಳಿ ಇರುವ ಯಾವುದೇ ಮಾಹಿತಿಯನ್ನು ಕೂಡಲೇ ತಮ್ಮ ಕಚೇರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ. ನಾಳೆ ತಾವು ಖುದ್ದಾಗಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.

ಅನೇಕ ಸಂಗತಿಗಳೊಂದಿಗೆ ಈ ವಿಚಾರವನ್ನು ಬಯಲಿಗೆಳೆಯುತ್ತೇನೆ. ಇದಕ್ಕೆ ಜನರ ಮಾಹಿತಿ ಅಗತ್ಯವಿದೆ. ನಮ್ಮ ಪಕ್ಷದ ಹಾಲಿ ಶಾಸಕರು ಇರುವ ಕ್ಷೇತ್ರಗಳಲ್ಲಿಯೂ ಈ ರೀತಿ ಮಾಡಲಾಗುತ್ತಿದೆ ಎಂದು ಸಿಎಂ ಆರೋಪಿಸಿದ್ದಾರೆ.

ಈಶ್ವರ್ ಖಂಡ್ರೆ ಅವರ ಭಾಲ್ಕಿ ಕ್ಷೇತ್ರ, ನಯನ ಮೋಟಮ್ಮ ಹಾಗೂ ತನ್ವೀರ್ ಸೇಠ್ ಅವರ ಕ್ಷೇತ್ರಗಳಲ್ಲೂ ಇಂತಹ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಇಡೀ ರಾಜ್ಯದಲ್ಲಿ ದೊಡ್ಡ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ, ಎಲ್ಲರೂ ಜಾಗೃತರಾಗಿರುವಂತೆ ಮನವಿ ಮಾಡಿದ್ದಾರೆ. ಎಲ್ಲೆಲ್ಲಿ ಫಾರ್ಮ್-7 ಸಲ್ಲಿಸಲಾಗಿದೆ ಎಂಬುದರ ಕುರಿತು 12 ಗಂಟೆಯೊಳಗೆ ಮಾಹಿತಿ ಒದಗಿಸುವಂತೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಮತದಾನವು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು.SIR ನೆಪದಲ್ಲಿ ಬಿಜೆಪಿ ಜನರಿಂದ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ದಲಿತರು, ಬಡವರು ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ತಪ್ಪು ಮಾಹಿತಿಯೊಂದಿಗೆ ಫಾರ್ಮ್-7 ಸಲ್ಲಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪು ಮಾಹಿತಿ ನೀಡಿ ನಾಗರಿಕರನ್ನು ಮತದಾರರ ಪಟ್ಟಿಯಿಂದ ದೂರವಿಡುವವರ ಬಗ್ಗೆ ಬಿಎಲ್​ಎಗಳು ನಿಖರ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button