*MRPL ಸ್ಫೋಟದ ಬೆನ್ನಲ್ಲೇ ದೈವದ ನುಡಿ ಮತ್ತೆ ಚರ್ಚೆಗೆ*: *‘ದೈವಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ’ ಎಂದಿದ್ದ ಕಾಂತೇರಿ ಜುಮಾದಿ*

ಪ್ರಗತಿವಾಹಿನಿ ಸುದ್ದಿ: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟದ ಬೆನ್ನಲ್ಲೇ ತುಳುನಾಡಿನಲ್ಲಿ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ನುಡಿ ಮತ್ತೆ ಚರ್ಚೆಗೆ ಬಂದಿದೆ. ಸ್ಫೋಟಕ್ಕೂ ದೈವದ ಎಚ್ಚರಿಕೆಗೂ ಸಂಬಂಧವಿದೆಯೇ ಎಂಬ ಚರ್ಚೆ ಸ್ಥಳೀಯರು ಹಾಗೂ ದೈವಾರಾಧಕರ ವಲಯದಲ್ಲಿ ನಡೆಯುತ್ತಿದೆ.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ನೆಲ್ಲಿದಡಿ ಗುತ್ತು ಬಜಪೆ ಗ್ರಾಮದ ವ್ಯಾಪ್ತಿಯಲ್ಲಿದೆ. ಈ ಕ್ಷೇತ್ರ ಧರ್ಮ, ನಿಷ್ಠೆ ಮತ್ತು ಕಾರ್ಣಿಕಕ್ಕೆ ಪ್ರಸಿದ್ಧವಾಗಿದ್ದು, ದೈವ ನೀಡಿದ ನುಡಿಯಂತೆ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇದೆ.
ಈ ಪ್ರದೇಶವು ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ವ್ಯಾಪ್ತಿಗೆ ಒಳಪಟ್ಟಿದೆ. ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ನೆಲ್ಲಿದಡಿ ಗುತ್ತುವಿನ ದೈವಸ್ಥಾನದ ಜಾಗವೂ ವಿವಾದಕ್ಕೆ ಒಳಗಾಗಿತ್ತು.
2006ರಲ್ಲಿ MSEZ ಅಭಿವೃದ್ಧಿಗಾಗಿ ಬಜಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಹಾಗೂ ಕಳವಾರು ಸೇರಿದಂತೆ ಹಲವು ಗ್ರಾಮಗಳ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಈ ವೇಳೆ ಗದ್ದೆಗಳು, ಮನೆಗಳು, ಶಾಲೆಗಳು, ಧಾರ್ಮಿಕ ಕೇಂದ್ರಗಳು, ನಾಗಬನಗಳು ಹಾಗೂ ದೈವಸ್ಥಾನಗಳೂ ಪರಿಣಾಮಕ್ಕೊಳಗಾದವು.
ಆದರೆ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನದ ಜಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಜಾಗವನ್ನು ಕಂಪನಿ ತನ್ನ ಹೆಸರಿಗೆ ಬರೆಸಿಕೊಂಡಿದ್ದರೂ, ಮಣ್ಣನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ನುಡಿ ದೈವದಿಂದ ಬಂದಿತ್ತು ಎಂದು ದೈವಾರಾಧಕರು ಹೇಳುತ್ತಾರೆ.
2016ರಲ್ಲಿ ದೈವಸ್ಥಾನದ ಜಾಗವನ್ನು ನೆಲಸಮಗೊಳಿಸಲು ಮತ್ತೊಮ್ಮೆ ಪ್ರಯತ್ನ ನಡೆದಿತ್ತು, ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಬಳಿಕ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ದೈವಸ್ಥಾನವನ್ನು ಸ್ಮಾರಕದ ರೂಪದಲ್ಲಿ ಉಳಿಸಿಕೊಂಡು ನಿತ್ಯ ಪೂಜೆಗೆ ಅವಕಾಶ ಕಲ್ಪಿಸಿತ್ತು.
ಆದರೆ 2025ರಲ್ಲಿ MSEZ ಹಾಗೂ MRPL ವ್ಯಾಪ್ತಿಯ ಅಧಿಕಾರಿಗಳು ದೈವಾರಾಧನೆಗೆ ಸಂಬಂಧಿಸಿದಂತೆ ಮತ್ತೆ ತಗಾದೆ ತೆಗೆದಿದ್ದರು. ದೈವಕ್ಕೆ ಹೂವು-ನೀರು ಅರ್ಪಿಸುವುದು ಹಾಗೂ ಸಂಕ್ರಮಣದ ನಿತ್ಯ ಪೂಜೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ ‘ನೆಲ್ಲಿದಡಿ ಗುತ್ತು ಉಳಿಸಿ’ ಎಂಬ ಅಭಿಯಾನವೂ ನಡೆದಿತ್ತು. ಬಳಿಕ ಪಾಸ್ ವ್ಯವಸ್ಥೆ ಮೂಲಕ ಸೀಮಿತವಾಗಿ ದೈವಾರಾಧನೆಗೆ ಅವಕಾಶ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ದರ್ಶನ ಸೇವೆಯಲ್ಲಿ ಕಾಂತೇರಿ ಜುಮಾದಿ ದೈವವು ನೆಲ್ಲಿದಡಿ ಗುತ್ತುವಿನ ಮುಖ್ಯಸ್ಥ ಚೌಟರಿಗೆ ಅಭಯ ನೀಡುವ ವೇಳೆ ಅಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. “ನನ್ನ ಸ್ಥಾನ ಕೆಡವಲು ಬಂದವರಿಗೆ ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ. ಜಾಗವನ್ನು ದೈವಸ್ಥಾನದ ಹೆಸರಿಗೆ ಬರೆದುಕೊಡದಿದ್ದರೆ ಬೆಂಕಿ ಸುರಿಸುತ್ತೇನೆ” ಎಂಬ ನುಡಿ ನೀಡಿತ್ತು ಎನ್ನಲಾಗಿದೆ.
ಇದೀಗ MRPL ಆವರಣದಲ್ಲಿ ಸ್ಫೋಟ ಹಾಗೂ ಅಗ್ನಿ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಆ ನುಡಿ ಮತ್ತೆ ಚರ್ಚೆಗೆ ಬಂದಿದೆ. ಸ್ಫೋಟಕ್ಕೂ ದೈವದ ನುಡಿಗೂ ಸಂಬಂಧವಿದೆ ಎಂಬುದು ಸ್ಥಳೀಯರು ಹಾಗೂ ದೈವಾರಾಧಕರ ನಂಬಿಕೆಯಾಗಿದೆ.
ಇದೇ ವೇಳೆ 2021ರಲ್ಲಿ MSEZ ಆವರಣದಲ್ಲಿದ್ದ ಮುಂಬೈ ಮೂಲದ ಕ್ಯಾಟಸಿಂಥ್ ಕಾರ್ಖಾನೆಯಲ್ಲೂ ಭಾರಿ ಅಗ್ನಿ ಅವಘಡ ಸಂಭವಿಸಿತ್ತು ಎಂದು ಸ್ಥಳೀಯರು ನೆನಪಿಸುತ್ತಿದ್ದಾರೆ. ಇದೀಗ ನಡೆದಿರುವ ಸ್ಫೋಟದ ಹಿನ್ನೆಲೆಯಲ್ಲಿ ಹಿಂದಿನ ಘಟನೆಗಳನ್ನೂ ಉಲ್ಲೇಖಿಸಿ ಚರ್ಚೆ ನಡೆಸಲಾಗುತ್ತಿದೆ.
ದೈವಸ್ಥಾನದ ಜಾಗವನ್ನು ದೈವಸ್ಥಾನಕ್ಕೇ ಹಸ್ತಾಂತರಿಸಬೇಕು ಎಂಬ ಬೇಡಿಕೆಯನ್ನು ದೈವಾರಾಧಕರು ಹಾಗೂ ಗ್ರಾಮಸ್ಥರು ಮತ್ತೆ ಮುಂದಿಟ್ಟಿದ್ದಾರೆ.
*BREAKING: ಎಂಆರ್‌ಪಿಎಲ್ ಘಟಕದಲ್ಲಿ ಸ್ಫೋಟ: ಓರ್ವ ಕಾರ್ಮಿಕ ಸಾವು* – Pragati Vahini
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


