
ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸಮೃದ್ಧಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಧಮನ್ಗಾಂವ್ ರೈಲ್ವೆ ನಿಲ್ದಾಣದ ಸಮೀಪ ಈ ದುರ್ಘಟನೆ ನಡೆದಿದೆ. ದುರ್ಗಾಪೂಜೆ ಹಿನ್ನೆಲೆಯಲ್ಲಿ ಭಕ್ತರ ತಂಡವೊಂದು ಬುಲ್ಧಾಣ ಜಿಲ್ಲೆಯ ಶೇಗಾಂವ್ನಿಂದ ವರ್ಧಾ ಕಡೆಗೆ ಟೆಂಪೋ ಪಿಕಪ್ ವಾಹನದಲ್ಲಿ ದುರ್ಗಾ ದೇವಿಯ ಮೂರ್ತಿಯನ್ನು ಕೊಂಡೊಯ್ಯುತ್ತಿತ್ತು.
ಈ ವೇಳೆ ಎದುರಿನಿಂದ ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪತ್ರಕರ್ತರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾದರು. ಬಳಿಕ ಧಮನ್ಗಾಂವ್ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಹೊರತೆಗೆದು ಸಮೀಪದ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




