*ಸಿಲಿಂಡರ್ ಸ್ಫೋಟಕ್ಕೆ ಒಂದೇ ಕುಟುಂಬದ 6 ಮಂದಿ ಗಾಯ*: *ತಾಯಿ, ಮಗುವಿನ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಬೆಳಗಿನ ಜಾವ ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ನಾಲ್ಕು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ದಂಪತಿ ಹಾಗೂ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ. ರಾಯಚೂರು ಮೂಲದ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಕರಿಲಿಂಗಪ್ಪ (40) ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು.
ಇಂದು ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ವೇಳೆ ಮನೆಯಲ್ಲಿದ್ದ ಕರಿಲಿಂಗಪ್ಪ, ಲಕ್ಷ್ಮಮ್ಮ (43), ಚೈತ್ರಾ (11), ಬಸವ (9), ಗೀತಾ ಹಾಗೂ ಗಿರಿಜಾ (3) ಗಾಯಗೊಂಡಿದ್ದಾರೆ.
ಸ್ಫೋಟದಿಂದ ಲಕ್ಷ್ಮಮ್ಮ ಮತ್ತು ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಎಲ್ಲರಿಗೂ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಇಬ್ಬರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




